Tuesday, October 14, 2008

ಗುರುಭಾರತೀ - ಕರ್ಮದ ಬಳ್ಳಿ ತುಂಡಾದಾಗ......

ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್
ಶ್ರೀಸಂಸ್ಥಾನಗೋಕರ್ಣ-ಶ್ರೀರಾಮಚಂದ್ರಾಪುರಮಠ
ಶ್ರೀಮತ್ಪರಮಹಂಸೇತ್ಯಾದಿಬಿರುದಾಲಂಕೃತ
ಶ್ರೀಗೋಕರ್ಣಮಂಡಲಾಧೀಶ್ವರ
ಶ್ರೀಮದ್ರಾಘವೇಂದ್ರಭಾರತೀಗುರುಕರಕಮಲಸಂಜಾತ
ಶ್ರೀಮಜ್ಜಗದ್ಗುರುಶಂಕರಾಚಾರ್ಯ

ಶ್ರೀಮದ್ರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂದೇಶ
ಗುರುಭಾರತೀ

ಕರ್ಮದ ಬಳ್ಳಿ ತುಂಡಾದಾಗ......

ಶ್ರೀದತ್ತಾತ್ರೇಯರ ಅವತಾರವೆಂದೇ ಪ್ರಸಿದ್ಧರಾದ ಶ್ರೀನೃಸಿಂಹಸರಸ್ವತೀಮಹಾಸ್ವಾಮಿಗಳು ಪಂಚಗಂಗಾ ಸಂಗಮದ ನರಸೋಬವಾಡಿಯಲ್ಲಿ ನೆಲೆಸಿದ್ದ ಕಾಲವದು. ಗ್ರಾಮದಲ್ಲಿ ಅತ್ಯಂತ ದರಿದ್ರನಾದ ಆದರೆ ಸುಶೀಲನಾದ ಬ್ರಾಹ್ಮಣನೊಬ್ಬನಿದ್ದನು. ಜೀವನೋಪಾಯಕ್ಕಾಗಿ ಅಲ್ಲಿ ಇಲ್ಲಿ ಭಿಕ್ಷೆ ಬೇಡುತ್ತಿದ್ದ ಆತನ ಮನೆಯ ಮುಂದೆ ಅವರೆಯ ಬಳ್ಳಿಯೊಂದು ಸಮೃದ್ಧವಾಗಿ ಬೆಳೆದಿತ್ತು. ಅದರಲ್ಲಿ ಅತಿಶಯವಾಗಿ ಆಗುತ್ತಿದ್ದ ಅವರೆಕಾಯಿಗಳಿಂದ ಅವನ ಉದರಭರಣವಾಗುತ್ತಿತ್ತು. ಶ್ರೀಗುರುಗಳ ಪರಮ ಭಕ್ತನಾಗಿದ್ದ ಆತ ಒಮ್ಮೆ ಗುರುಗಳನ್ನು ಮನೆಗೆ ಕರೆದುಕೊಂಡು ಹೋಗಿ ಅತ್ಯಂತ ಶ್ರದ್ಧೆಯಿಂದ ಪೂಜಿಸಿದ. ಗುರುಗಳು ಬ್ರಾಹ್ಮಣನನ್ನು ಹತ್ತಿರ ಕರೆದು “ಇಂದಿಗೆ ನಿನ್ನ ದಾರಿದ್ರ್ಯವು ತೊಲಗಿತು, ಅಖಂಡೈಶ್ವರ್ಯವು ನಿನ್ನಲ್ಲಿ ಇನ್ನು ಮೇಲೆ ಸ್ಥಿರವಾಗಿರುವುದು” ಎಂದು ವರವನ್ನಿತ್ತು ಹೊರಟರು. ಹೊರಗೆ ಹೋಗುವಾಗ ಅಂಗಳದಲ್ಲಿ ಬೆಳೆದಿದ್ದ ಅವರೆಯ ಬಳ್ಳಿಯನ್ನು ಬೇರಿನವರೆಗೆ ಕತ್ತರಿಸಿ ಹಾಕಿ ಹೊರಟು ಹೋದರು. ಬ್ರಾಹ್ಮಣ ಕುಟುಂಬಕ್ಕೆ ಆಘಾತವಾಯಿತು. ಜೀವನಕ್ಕೆ ಏಕೈಕ ಆಧಾರವಾಗಿದ್ದ ಅವರೆಯ ಬಳ್ಳಿಯ ನಾಶಕ್ಕಾಗಿ ಬ್ರಾಹ್ಮಣ ಪತ್ನಿಯು ಶೋಕಿಸತೊಡಗಿದಳು. ಕತ್ತರಿಸಿ ಚೆಲ್ಲಿದ ಅವರೆಬಳ್ಳಿಯನ್ನು ತೆಗೆದು ನದಿಗೆಸೆದ ಬ್ರಾಹ್ಮಣ “ಬಳ್ಳಿಯೇ ಹೋದಮೇಲೆ ಅದರ ಬೇರು ನಮ್ಮ ಮನೆಯ ಮುಂದೆ ಏಕಿರಬೇಕು?” ಎಂಬ ಭಾವನೆಯಿಂದ ಅದರ ಬೇರು ಅಗೆದು ತೆಗೆಯತೊಡಗಿದನು. ಆಗ ಬೇರುಗಳ ಅಡಿಯಲ್ಲಿ ಹೊನ್ನಿನ ಕುಂಭವೊಂದು ಕಾಣಸಿಕ್ಕಿತು. ಬ್ರಾಹ್ಮಣನ ಸಮಸ್ತ ದಾರಿದ್ರ್ಯವೂ ಪರಿಹಾರವಾಗಿ ಅμಶ್ವರ್ಯಪ್ರಾಪ್ತಿಯಾಗಿತ್ತು.

ಈ ಕಥೆಯಲ್ಲಿ ಬರುವ ಬ್ರಾಹ್ಮಣ ಮನೆಯಂಗಳದಲ್ಲಿ ಅವರೆ ಬಳ್ಳಿಯನ್ನು ನೆಟ್ಟುಕೊಂಡು ನಿತ್ಯವೂ ಅದರ ಫಲವನ್ನು ತಿನ್ನುವಂತೆ ನಮ್ಮ ಮನೆಯಂಗಳದಲ್ಲಿ ಬಹುಕಾಲದಿಂದ ರೂಢಮೂಲವಾದ ಪೂರ್ವಕರ್ಮದ ಬಳ್ಳಿಯಲ್ಲಿ ಬಿಡುವ ದುಃಖ-ದಾರಿದ್ರ್ಯಗಳ ಫಲವನ್ನು ಅನುದಿನವೂ ತಿನ್ನುತ್ತಿದ್ದೇವೆ. ಪರಮಕೃಪಾಕರನಾದ ಗುರು ಕೃಪೆದೋರಿ ಆ ಕರ್ಮದ ಬಳ್ಳಿಯನ್ನು ಕತ್ತರಿಸಿದಾಗ ಪ್ರಕೃತಿಗರ್ಭದಲ್ಲಿ ಮುಚ್ಚಿಹೋಗಿರುವ ಆತ್ಮಾನಂದದ ನಿಧಿ ನಮಗೆ ದೊರೆಯುತ್ತದೆ. ಒಮ್ಮೆ ಆ ನಿಧಿ ದೊರೆತವನು ಮತ್ತೆ ಎಂದೆಂದಿಗೂ ಬಡವನಾಗಲಾರ.
ಕೃಪೆಃ ಧರ್ಮಭಾರತೀ ಮಾಸಪತ್ರಿಕೆ - ಆಗಸ್ಟ್

ಧರ್ಮಭಾರತೀ ಆಗಸ್ಟ್ ಪತ್ರಿಕೆ
ಒಲವಿನ ಓದುಗ......

ಒಲವಿಂದ ಒಳಗೆ ಬಾ.....
ವಿಚಾರ ಶೀಲ !
ಪ್ರಕೃತ ಸಂಚಿಕೆಯಲ್ಲಿ ಕೀರ್ತಿಶೇಷ ಶ್ರೀ ಡಿ.ವಿ.ಜಿಯವರ “ಬಾಳಿಗೊಂದು ನಂಬಿಕೆ” ಧಾರಾವಾಹಿಯಾಗಿ ಆರಂಭಗೊಂಡಿದೆ. ಇದೊಂದು ಹೊಸ ಉಪಕ್ರಮ. ಒಂದೊಂದು ತಲೆಮಾರು ಕಳೆಯತೊಡಗಿದಂತೆ ಓದುವ ಆಯ್ಕೆ ಮತ್ತು ಆದ್ಯತೆ ಬದಲಾಗುತ್ತಾ ಹೋಗುತ್ತದೆ. ಹಾಗೆಯೇ ಲೇಖಕರ ಆಯ್ಕೆಯೂ ಬದಲಾಗುತ್ತದೆ. ಇದರಿಂದಾಗಿ ಭಾವನೆಗಳು ಮತ್ತು ಯೋಚನೆಗಳು ಬೇರೆಯಾಗುತ್ತವೆ. ಇದರ ಪರಿಣಾಮವೇ ‘ಆಧುನಿಕ’ ಎನ್ನುವ ಹೊಸ ಬದುಕಿನ ಪರಿ. ‘ಆಧುನಿಕ’ ತಪ್ಪಲ್ಲ; ಪುರಾತನದ ಬೇರನ್ನು ಮರೆತಿರುವುದು ತಪ್ಪು. ಪ್ರತಿ ವಸಂತಕ್ಕೊಮ್ಮೆ ಮರ ಹೊಸತಾದರೂ ಬೇರು ಹಳೆಯದೇ. ಹಾಗಾಗಿಯೇ ಶ್ರೀ ಡಿ.ವಿ.ಜಿ “ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು” ಎನ್ನುತ್ತಾರೆ.ಹಳೆಬೇರನ್ನು ಮತ್ತೆ ಮತ್ತೆ ನೆನಪಿಸುತ್ತಲೇ ಇರುವುದೇ “ಧರ್ಮಭಾರತಿ”ಯ ಕಾರ್ಯ. ಹಾಗಾಗಿ ಹಳೆ ಲೇಖಕರ ಹಳೆ ಬೇರಿನ ಕುರಿತಾದ ಹಳೆ ಗ್ರಂಥಗಳನ್ನು ಹೊಸದಾಗಿ ಸಮಗ್ರವಾಗಿ ಮುದ್ರಿಸುತ್ತಿದ್ದೇವೆ.


**********
ಹಿಂದಿನ ಸಂಚಿಕೆಯಲ್ಲಿ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲೋಸುಗ “ನನ್ನದೊಂದು ಪ್ರಶ್ನೆ” ಅಂಕಣ ಪ್ರಾರಂಭವಾಗಿತ್ತು. ಈ ಸಂಚಿಕೆಯಲ್ಲಿ “ಇದರ ಅರ್ಥ ಹೇಳಿ” ಅನ್ನುವ ಅಂಕಣ ಆರಂಭಗೊಳ್ಳುತ್ತಿದೆ. ಭಾರತೀಯ ಸಂಸ್ಕೃತಿ ಸಂಸ್ಕೃತವನ್ನು ಆಧರಿಸಿ ನಿಂತಿದೆ. ಸಂಸ್ಕೃತಿ ಸಮಗ್ರವಾಗಿ ಅರ್ಥವಾಗಲು ಮೂಲದ ಅರಿವು ಅತ್ಯಾವಶ್ಯಕ. ಮೂಲ ವಿಷಯವಿರುವ ಭಾಷೆಯಿಂದ ನಾವಿಂದು
ದೂರ ಸರಿದಿದ್ದೇವೆ. ನಮ್ಮೆಲ್ಲರ ಪರಿಸರದಲ್ಲಿ ಸಂಸ್ಕೃತವನ್ನು ಅರಿತವರು ಇರಲಾರರು. ನಮಗರ್ಥವಾಗದ ಯಾವುದೋ ಸಂಸ್ಕೃತ ಶ್ಲೋಕ ನಮಗೆ ಗೊತ್ತಿರಬಹುದು. ಈ ಸಮಸ್ಯೆಯ ಪರಿಹಾರಕ್ಕಾಗಿ ಈ ಅಂಕಣ. ಶ್ಲೋಕ ನೀವು ಕಳುಹಿಸಿ; ಅರ್ಥ ನಾವು ಹೇಳ್ತೇವೆ.
***********
‘ಸನಾತನಭಾರತ’ ಅಂಕಣ ಮುಂದುವರಿಯುತ್ತಿದೆ. ಹಿಂದಿನ ವಿಶೇಷ ಸಂಚಿಕೆಗೆ ಸಂಗ್ರಹಿಸಿದ ವಿಷಯಗಳಿವು. ಆ ಸಂಚಿಕೆಯನ್ನು ರೂಪಿಸಿಯೂ ಉಳಿದ ಲೇಖನಗಳ ಸಂಖ್ಯೆ ದೊಡ್ಡದು. ಸನಾತನಭಾರತ ಎಲ್ಲಕ್ಕಿಂತ ದೊಡ್ಡದು.

ಧರ್ಮಭಾರತೀ ಆಗಸ್ಟ್ ಪತ್ರಿಕೆಯನ್ನು ಅಂತರಜಾಲದಲ್ಲಿ ಓದಬಹುದು. ವಿಳಾಸ: http://www.dharmabharathi.org/epaper.html


ಮತ್ತೆಲ್ಲ ಎಂದಿನಂತೆ.......


ಒಲವಿನ ಒಸಗೆಯಲ್ಲಿ

-ವಿದ್ವಾನ್ ಜಗದೀಶ ಶರ್ಮಾ
ಸಂಪಾದಕ

Sunday, September 28, 2008

ಗುರುಭಾರತೀ - ಮಗು ಯಾರದು?

ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್
ಶ್ರೀಸಂಸ್ಥಾನಗೋಕರ್ಣ-ಶ್ರೀರಾಮಚಂದ್ರಾಪುರಮಠ
ಶ್ರೀಮತ್ಪರಮಹಂಸೇತ್ಯಾದಿಬಿರುದಾಲಂಕೃತ
ಶ್ರೀಗೋಕರ್ಣಮಂಡಲಾಧೀಶ್ವರ
ಶ್ರೀಮದ್ರಾಘವೇಂದ್ರಭಾರತೀಗುರುಕರಕಮಲಸಂಜಾತ
ಶ್ರೀಮಜ್ಜಗದ್ಗುರುಶಂಕರಾಚಾರ್ಯ

ಶ್ರೀಮದ್ರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂದೇಶ
ಗುರುಭಾರತೀ

ಮಗು ಯಾರದು?

ವಿವಾದಗಳನ್ನು ಸತ್ಯಸಮ್ಮತವಾಗಿ ನ್ಯಾಯನಿಷ್ಠುರವಾಗಿ ನಿರ್ಣಯಿಸುವುದರಲ್ಲಿ ಲೋಕ ಪ್ರಸಿದ್ಧನಾದ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಪ್ರಜೆಗಳ ಯೋಗಕ್ಷೇಮಗಳನ್ನು ವಿಚಾರಿಸುತ್ತಿರುವಾಗ ಸ್ತ್ರೀಯರ ನಡುವಿನ ವಿವಾದವೊಂದು ನ್ಯಾಯನಿರ್ಣಯಕ್ಕಾಗಿ ರಾಜನ ಮುಂದೆ ಬಂದಿತು. ಇಬ್ಬರು ಸ್ತ್ರೀಯರು ಮುದ್ದಾದ ಮಗುವೊಂದನ್ನು“ ತನ್ನ ಮಗು- ತನ್ನ ಮಗು” ಎಂದು ವಾದಿಸುತ್ತಿದ್ದರು. ರಾಜ ಇಬ್ಬರ ಅಹವಾಲುಗಳನ್ನೂ ಸಾವಧಾನವಾಗಿ ಆಲಿಸಿದ. ಇಬ್ಬರ ವಾದಕ್ಕೂ ಸಾಕಷ್ಟು ಪುಷ್ಟಿಯೇ ಇದ್ದ ಕಾರಣ ಮಗು ಯಾರದೆಂದು ಗುರುತಿಸಲು ಸಾಧ್ಯವಾಗಲಿಲ್ಲ. ವಿಕ್ರಮಾದಿತ್ಯ ಬಹುವಿಧವಾದ ಪರೀಕ್ಷೆಗಳನ್ನೇರ್ಪಡಿಸಿದ. ಇದ್ಯಾವುದೂ ಫಲಕಾರಿಯಾಗದಿದ್ದಾಗ ಭಟರನ್ನು ಕರೆದು ಮಗುವನ್ನು ಖಡ್ಗದಿಂದ ಇಬ್ಭಾಗ ಮಾಡಿ ಇಬ್ಬರು ತಾಯಿಯರಿಗೂ ಹಂಚಲು ಆದೇಶಿಸಿದ. ಮಗುವನ್ನು ಕತ್ತರಿಸಲು ಭಟರುಗಳು ಖಡ್ಗದೊಡನೆ ಮುಂದೆ ಬಂದರು. ಈರ್ವರು ಮಹಿಳೆಯರಲ್ಲಿ ಒಬ್ಬಳ ಮುಖ ಕಳೆಗುಂದಿತು. ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯತೊಡಗಿತು. ರಾಜನಲ್ಲಿ ಆಕೆ ಸೆರಗೊಡ್ಡಿ ಬೇಡಿದಳು- “ಮಹಾಪ್ರಭೂ! ದಯಮಾಡಿ ಮಗವನ್ನು ಕೊಲ್ಲಬೇಡಿ. ಆಕೆಗೇ ಮಗುವನ್ನು ಕೊಡಿ. ತಪ್ಪಿತಸ್ಥೆಯೆಂದು ನನ್ನನ್ನು ಶಿಕ್ಷಿಸಿದರೂ ಚಿಂತೆಯಿಲ್ಲ. ಎಲ್ಲಿಯಾದರೂ- ಹೇಗಾದರೂ ಮಗು ಬದುಕಿಕೊಂಡಿರಲಿ.” ತಕ್ಷಣವೇ ಮಹಾರಾಜ ಮಗುವನ್ನು ಆಕೆಗೇ ಕೊಡಲು ಅಪ್ಪಣೆ ಮಾಡಿದ. ಮಗುವನ್ನು ಕತ್ತರಿಸ ಹೊರಟರೂ ವಿಚಲಿತಳಾಗದ ಮತ್ತೊಬ್ಬಾಕೆಯನ್ನು ಸೆರೆಗೆ ತಳ್ಳಿದ.

ಆದಿಗುರು ಶಂಕರಾಚಾರ್ಯರು ಒಂದೆಡೆ ಹೇಳುತ್ತಾರೆ - ‘ಕೆಟ್ಟ ಮಕ್ಕಳಿರಬಹುದು, ಎಲ್ಲಿಯೂ ಕೆಟ್ಟ ತಾಯಿ ಇರಳು.“ ತಾಯಿ ಹೃದಯನಿಸ್ಸ್ವಾರ್ಥವಾದುದು. ವಾತ್ಸಲ್ಯಮಯವಾದುದು. ಈ ಕಥೆಯಲ್ಲಿ ಬರುವ ನಿಜವಾದ ತಾಯಿ ತನ್ನ ಮಗುವಿನ ಉಳಿವಿಗಾಗಿ ಅದನ್ನು ಬಿಟ್ಟುಕೊಟ್ಟು ತಾನು ಶಿಕ್ಷೆ ಅನುಭವಿಸಲೂ ಸಿದ್ಧಳಾದಳು. ನಿಸ್ಸ್ವಾರ್ಥವಾಗಿ ಮಕ್ಕಳ ಏಳಿಗೆಯನ್ನು ಬಯಸುವವಳೇ ನಿಜವಾದ ತಾಯಿ.

ಕೃಪೆಃ ಧರ್ಮಭಾರತೀ ಮಾಸಪತ್ರಿಕೆ - ಏಪ್ರಿಲ್

Saturday, September 20, 2008

ಗೋಕರ್ಣದ ಬಗ್ಗೆ ವಿಜಯಕರ್ನಾಟಕದಲ್ಲಿ ಪ್ರಕಟಗೊಂಡ ಶ್ರೀ ಪ್ರತಾಪಸಿಂಹರವರ ಲೇಖನ

ಹೇ ಆದಿಶಂಕರ, ‘ಏಜೆಂಟ’ರಿಗೆ ಸೇರಬೇಕೇ ಅಧಿಕಾರ?

ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ
ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ
ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈಃ
ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ


ಅಂದರೆ, ‘ಯತಿಶ್ರೇಷ್ಠನಾದ ವಿದ್ಯಾನಂದನೇ, ಗೋಕರ್ಣ ದಲ್ಲಿ ನಿಲ್ಲು. ನಿತ್ಯವೂ ಮಹಾಬಲನ ಲಿಂಗವನ್ನು ವಿಧಿವತ್ತಾಗಿ ಅರ್ಚಿಸು. ನಿನ್ನ ಶಿಷ್ಯ ಪರಂಪರೆಯಿಂದ ಒಡಗೂಡಿ ಆಚಾರ್ಯತ್ವವನ್ನು ಮಾಡುತ್ತಾ ಮಹಾಮತಿಯಾದ ನೀನು ಇಲ್ಲಿರು’ ಎಂದು ನುಡಿದ ಆದಿ ಶಂಕರಾಚಾರ್ಯರೇ ಗೋಕರ್ಣದಲ್ಲಿ ಮಠವೊಂದನ್ನು ಸ್ಥಾಪಿಸಿದರು.

ವರದ ಮಹರ್ಷಿಯಿಂದ ಪ್ರಾಪ್ತವಾಗಿದ್ದ ಶ್ರೀರಾಮಾದಿ ವಿಗ್ರಹಗಳು, ಚಂದ್ರಮೌಳಿಯ ಲಿಂಗ, ಪಾದುಕೆಯನ್ನು ವಿದ್ಯಾನಂದರಿಗೆ ಒಪ್ಪಿಸಿದ ಶಂಕರಾ ಚಾರ್ಯರು ಈ ಮಠ ‘ರಘೂತ್ತಮ ಮಠ’ವೆಂದು ಪ್ರಸಿದ್ಧಿ ಯಾಗಲಿ ಎಂದು ಹಾರೈಸಿ ಜಗನ್ನಾಥ ಕ್ಷೇತ್ರಕ್ಕೆ ತೆರಳಿದರು. ಹೀಗೆ ಶಂಕರಾಚಾರ್ಯರಿಂದ ನೇರವಾಗಿ ದೀಕ್ಷೆ ಪಡೆದ ವಿದ್ಯಾನಂದರೇ ಈ ಮಠದ ಮೊದಲ ಪೀಠಾಧಿಪತಿಗಳು. ಗೋವಾದ ಮಾಂಡೋವಿ ನದಿಯಿಂದ ಕೇರಳದ ಚಂದ್ರ ಗಿರಿ ನದಿಯವರೆಗೆ ಮಠದ ವ್ಯಾಪ್ತಿ ಹರಡುತ್ತದೆ. ಇದು ಒಂದು ಜಾತಿಗೆ ಸೇರಿದ ಮಠವಲ್ಲ. ಈ ಪ್ರದೇಶಗಳಲ್ಲಿ ಕಂಡುಬರುವ ಹವ್ಯಕ, ದೇವಾಂಗ, ಮಡಿವಾಳ, ಭಂಡಾರಿ, ಹಾಲಕ್ಕಿ, ಅಮ್ಮಕೊಡವ, ಪದ್ಮಶಾಲಿ, ಭೋವಿ, ಹರಿಕಂತರು, ಮರಾಠಿ, ಕೋಕಾಬಿ, ಪಡಿಯಾರು, ಗುಡಿಗಾರ, ಭಜಂತ್ರಿ, ಗಾಣಿಗ, ಗೋಮಾಂತರು, ಕಂಚುಗಾರ, ಕೆಡಿಯ ಹೀಗೆ ೧೮ ಜಾತಿಗಳು ರಘೂತ್ತಮ ಮಠಕ್ಕೆ ಸೇರಿವೆ.

ಇದೇನೇ ಇರಲಿ, ನಮ್ಮ ಕರ್ನಾಟಕದಲ್ಲಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ತಲೆಯೆತ್ತಿದ ವಿಜಯ ನಗರ ಸಾಮ್ರಾಜ್ಯ ಹಾಗೂ ಆ ಸಾಮ್ರಾಜ್ಯದ ವ್ಯಾಪ್ತಿಗೆ ಸೇರಿದ್ದ ಮಂಡಲಾಧೀಶರು, ಪ್ರಾಂತಾಧಿಪತಿಗಳು, ಪಾಳೇಗಾರರು ಮಠಕ್ಕೆ ದಾನ, ದತ್ತಿ ನೀಡಲಾರಂಭಿಸಿದರು. ಅವರು ನೀಡಿದ ಹಗಲು ದೀವಟಿಗೆ, ಶ್ವೇತಛತ್ರಗಳು, ಕುದುರೆ, ಆನೆ, ಒಂಟೆಗಳಿಂದ ಶ್ರೀಕ್ಷೇತ್ರ ಗೋಕರ್ಣದಲ್ಲಿ ತಲೆಯೆತ್ತಿದ್ದ ರಘೂತ್ತಮ ಮಠಕ್ಕೂ ವೈಭವ ಬಂತು.

ಈ ರಘೂತ್ತಮ ಮಠಕ್ಕೂ ರಾಮಚಂದ್ರಾಪುರ ಮಠಕ್ಕೂ ಒಂದು ಕೊಂಡಿಯಿದೆ.

ರಘೂತ್ತಮ ಮಠದ ೧೨ನೇ ಯತಿಗಳಾದ ಶ್ರೀ ರಾಮ ಚಂದ್ರ ಭಾರತೀ ಸ್ವಾಮಿಗಳು ಕಾರಣಾಂತರದಿಂದ ಹೊಸನಗರ ತಾಲೂಕಿನಲ್ಲಿರುವ ಶ್ರೀರಾಮಚಂದ್ರಾಪುರ ಗ್ರಾಮದ ಶರಾವತಿ ನದಿ ತೀರಕ್ಕೆ ವಲಸೆ ಬಂದರು. ಅಲ್ಲೇ ಒಂದು ಕುಟೀರವನ್ನು ನಿರ್ಮಿಸಿಕೊಂಡು ವಾಸಮಾಡಲಾರಂಭಿಸಿದರು. ಹಾಗೆ ಯತಿಗಳೇ ಆಗಮಿಸಿದ ಕಾರಣ ಶ್ರೀರಾಮಚಂದ್ರಾಪುರವೇ ಮಠದ ಮುಖ್ಯಕೇಂದ್ರವಾಯಿತು. ರಘೂತ್ತಮ ಮಠ ಹೋಗಿ ಶ್ರೀರಾಮಚಂದ್ರಾಪುರ ಮಠವಾಯಿತು. ಇತ್ತ ೧೨ನೇ ಯತಿಗಳು ಇರುವವರೆಗೂ ಆದಿ ಶಂಕರಾಚಾರ್ಯರ ಅಣತಿಯಂತೆ ಗೋಕರ್ಣದಲ್ಲಿರುವ ವಿಶ್ವವಿಖ್ಯಾತ ಶ್ರೀಸಂಸ್ಥಾನ ಮಹಾಬಲೇಶ್ವರ ದೇವರ ಹಾಗೂ ಪರಿವಾರ ದೇವರ ಪೂಜಾದಿ ಸೇವೆಗಳನ್ನು ಮಠದ ಪೀಠಾಧಿಪತಿಗಳೇ ನೆರವೇರಿಸುತ್ತಾ ಬರುತ್ತಿದ್ದರು. ಅವರಿಗೆ ಪೂಜಾಕಾರ್ಯಗಳ ಸಂದರ್ಭದಲ್ಲಿ ಸಹಾಯ ಮಾಡಲು ಉಪಾಧಿವಂತರು ಎಂಬವವರಿದ್ದರು. ಆದರೆ ೧೨ನೇ ಯತಿಗಳು ರಾಮಚಂದ್ರಾಪುರಕ್ಕೆ ಬಂದು ನೆಲೆಸಿದ ಕಾರಣ, ರಾಮಚಂದ್ರಾಪುರವೇ ಮುಖ್ಯವಾದ ಕೇಂದ್ರವಾದ ಸಲುವಾಗಿ ಗೋಕರ್ಣದ ಮಹಾಬಲೇಶ್ವರ ಹಾಗೂ ಪರಿವಾರ ದೇವರ ಪೂಜಾ ಸೇವೆಯನ್ನು ಯತಿಗಳೇ ನೆರವೇರಿ ಸಲು ಸಾಧ್ಯವಾಗದಂತಾಯಿತು. ಇಂತಹ ಪರಿಸ್ಥಿತಿಯಲ್ಲಿ ಯತಿಗಳಿಗೆ ಪೂಜಾ ಸಂದರ್ಭದಲ್ಲಿ ಸಹಾಯ ಮಾಡುತ್ತಿದ್ದ ಉಪಾಧಿವಂತರೇ ಅರ್ಚನೆ ಮಾಡಬೇಕಾಗಿ ಬಂತು. ಆದರೆ ಮಠ ಸ್ಥಳಾಂತರಗೊಂಡರೂ ಉಪಾಧಿವಂತರು ಪೀಠಾಧಿಪತಿಗಳ ಹತೋಟಿಯಲ್ಲೇ ಇದ್ದರು, ಅಣತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದರು. ಇತ್ತೀಚಿನವರೆಗೂ, ಅಂದರೆ ೧೯೮೩ರಲ್ಲಿ ಶ್ರೀಕ್ಷೇತ್ರ ಗೋಕರ್ಣದಲ್ಲಿ ಶ್ರೀಸಂಸ್ಥಾನ ಮಹಾಬಲೇಶ್ವರ ದೇವರಿಗೆ ಅಷ್ಟಬಂಧ ಕಾರ್ಯಕ್ರಮ ನಡೆದಾಗಲೂ ಮಠದ ೩೫ನೇ ಪೀಠಾಧಿಪತಿಗಳಾಗಿದ್ದ ರಾಘವೇಂದ್ರ ಭಾರತೀ ಅವರೇ ಮುಂದೆ ನಿಂತು ನವರತ್ನಾದಿಗಳನ್ನು ದೇವರಿಗೆ ಅರ್ಪಿಸಿ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟಿದ್ದರು. ಇಂದಿಗೂ ಪೀಠಾಧಿಪತಿಗಳ ಪರಾಕು ಹೇಳುವಾಗ “ಶ್ರೀಸಂಸ್ಥಾನ ಗೋಕರ್ಣ ಮಂಡಲಾಧೀಶ್ವರ ಶ್ರೀಮದ್ ಜಗದ್ಗುರು ಶಂಕರಾಚಾರ್ಯ” ಎನ್ನಲಾಗುತ್ತದೆ.

ಆದರೆ ಆದಿಶಂಕರರು ಹಾದುಹೋದ ಗೋಕರ್ಣಕ್ಕೆ ಇಂದು ನೀವೇನಾದರೂ ಭೇಟಿ ಕೊಟ್ಟರೆ ದೇವರು ಇರುವಿಕೆಯ ಬಗ್ಗೆಯೇ ನಿಮ್ಮ ಮನದಲ್ಲಿ ಖಂಡಿತ ಅನು ಮಾನಗಳೇಳುತ್ತವೆ!! ಬೆಂಗಳೂರಿನ ಮೆಜೆಸ್ಟಿಕ್ ಬಸ್‌ಸ್ಟಾಂಡ್ ಅಥವಾ ಗಾಂಧೀನಗರದಲ್ಲಿ ಬಸ್‌ನಿಂದ ಕೆಳಗಿಳಿದ ಕೂಡಲೇ “ನಿಮ್ಮ ಕೈಯಲ್ಲಿನ ಬ್ಯಾಗನ್ನು ಮೊದಲು ಕಿತ್ತುಕೊಂಡು, ಬನ್ನಿ ಸಾರ್ ಕುಳಿತುಕೊಳ್ಳಿ, ಎಲ್ಲಿಗೆ ಹೋಗಬೇಕು ಸಾರ್” ಎನ್ನುತ್ತಾ ಮುತ್ತಿಗೆ ಹಾಕುವ ಆಟೋ ಡ್ರೈವರ್‌ಗಳಂತೆ ಗೋಕರ್ಣದಲ್ಲಿ ಅರ್ಚಕರು ನಿಮ್ಮ ಮೇಲೆ ಮುಗಿಬೀಳುತ್ತಾರೆ!! ಸಾಮಾನ್ಯ ಜನರೂ ದೇವರನ್ನು ಮಟ್ಟಬಹುದಾದ ಎರಡೇ ಎರಡು ಕ್ಷೇತ್ರಗಳೆಂದರೆ ಕಾಶಿ ಮತ್ತು ಗೋಕರ್ಣ. ಆದರೆ ಗೋಕರ್ಣದ ಅರ್ಚಕರು, ‘ದೇವರನ್ನು ಮುಟ್ಟಬೇಕಾ?’ ಅಂತ ಕೇಳಿದಾಗ ನೀವೇನಾದರೂ ‘ಹೌದು’ ಎಂದರೆ ಕೂಡಲೇ ‘ರೇಟ್’ ಹೇಳಿ ಬಿಡುತ್ತಾರೆ! ಮೊದಲು ಉಪಾಧಿವಂತರ ಸುಮಾರು ಐದು ಕುಟುಂಬಗಳು ಇಲ್ಲಿ ಅರ್ಚನೆ ಕಾರ್ಯದಲ್ಲಿ ತೊಡಗಿದ್ದವು. ಆದರೆ ಕಾಲಾಂತರದಲ್ಲಿ ಕುಟುಂಬಗಳ ಗಾತ್ರ ದೊಡ್ಡದಾಗಿ, ಒಡೆದು ಹೋಳಾಗಿ, ಪ್ರತ್ಯೇಕವಾಗಿ ಇಂದು ೩೦ಕ್ಕೂ ಹೆಚ್ಚು ಕುಟುಂಬಗಳಿವೆ. ಹಾಗಾಗಿ ಪೂಜಾ ಕಾರ್ಯ ನೆರವೇರಿಸುವುದಕ್ಕೂ ಪೈಪೋಟಿ ಸೃಷ್ಟಿಯಾಗಿದೆ, ಕಿತ್ತಾಟವೂ ನಡೆದಿದೆ. ಹಾಗಾಗಿ ಒಳ ಒಪ್ಪಂದ ಏರ್ಪಟ್ಟು ತಿಂಗಳಲ್ಲಿ ಇಂತಿಷ್ಟು ದಿನ ಒಂದು ಕುಟುಂಬಕ್ಕೆ ಎಂದು ವಿಭಜನೆ ಮಾಡಿಕೊಳ್ಳಲಾಗಿದೆ. ಇಲ್ಲೂ ಒಂದು ರಾಜಕೀಯವಿದೆ. ಒಂದು ಕುಟುಂಬದ ಸರದಿ ಬಂದಾಗ ಉಳಿದ ಕುಟುಂಬಗಳ ಅರ್ಚಕರು ಖಾಲಿ ಕುಳಿತುಕೊಳ್ಳುವುದಿಲ್ಲ. ಪೂಜೆ, ಪುನಸ್ಕಾರವನ್ನು ಮಾತ್ರ ದೇವಸ್ಥಾನದಲ್ಲಿ ಮಾಡಿಸಿ, ಹೋಮ, ಹವನಗಳನ್ನು ನಾವು ಮನೆಯಲ್ಲೇ ಬೇಗ ಮಾಡಿಕೊಡುತ್ತೇವೆ ಎಂದು ಭಕ್ತಾದಿಗಳನ್ನೇ ಪುಸಲಾಯಿಸುತ್ತಾರೆ!ಇಂತಹ ಅರ್ಚಕರು(ದೇವರ ಏಜೆಂಟರು) ಇರುವ ಕ್ಷೇತ್ರ ಗಳ ಸ್ವಾಸ್ಥ್ಯ ಹೇಗೆ ತಾನೇ ಹಾಳಾಗದೆ ಉಳಿಯಲು ಸಾಧ್ಯ?

ಇಲ್ಲಿನ “ಓಂ ಬೀಚ್”ಗೆ ಹಿಪ್ಪಿಗಳು ಬಂದಿದ್ದಾರೆ, ಬಾರ್ ಗಳಾಗಿವೆ, ಲಾಡ್ಜ್‌ಗಳಿವೆ, ‘ಚಿನ್ನವೀಡು’ ಸೌಲಭ್ಯವೂ ಇದೆ. ಮತ್ತೂ ಒಂದು ವಿಶೇಷವೆಂದರೆ ಆ ಬಾರ್, ಲಾಡ್ಜ್, ಲಿಕ್ಕರ್ ಶಾಪ್‌ಗಳ ಮಾಲೀಕರಲ್ಲಿ ದೇವರ ಏಜೆಂಟರೂ ಇದ್ದಾರೆ. ವಿದೇಶಿ ಮದ್ಯವೂ ದೊರೆಯುತ್ತದೆ, ಮಾನಿನಿಯರೂ ಸಿಗುತ್ತಾರೆ. ದಕ್ಷಿಣದ ಕಾಶಿ ಎಂದೇ ಹೆಸರಾಗಿದ್ದ ಗೋಕರ್ಣ ವಿಂದು ಹೇಸಿಗೆಪಟ್ಟುಕೊಳ್ಳಬೇಕಾದ ಮಟ್ಟಕ್ಕೆ ಹೋಗಿದೆ. ಅಲ್ಲಿಗೆ ಹೋದರೆ ದೇವರ ಮೇಲೆ ಇದ್ದ ಶ್ರದ್ಧೆಯೂ ಹೊರಟು ಹೋಗುತ್ತದೆ, ಅರ್ಚಕರ ಬಗ್ಗೆ ಅಸಹ್ಯವುಂಟಾಗುತ್ತದೆ. ಇಷ್ಟಾಗಿಯೂ ಗೋಕರ್ಣದ ಕೊಳೆ ತೊಳೆಯಲು ಸಾಧ್ಯವಾಗುತ್ತಿರಲಿಲ್ಲ.

ಅದಕ್ಕೆ ಕಾರಣವೂ ಇದೆ.
೧೯೫೦ರ ‘ಬಾಂಬೆ ದತ್ತಿ ಕಾಯಿದೆ’ ಒಂದು ದೊಡ್ಡ ಅಡಚಣೆಯಾಗಿತ್ತು. ಈ ಕಾಯಿದೆ ಜಾರಿಗೆ ಬಂದಾಗ ಮಠದ ನಿಯಂತ್ರಣದಲ್ಲಿದ್ದ ಗೋಕರ್ಣದ ಶ್ರೀಮಹಾ ಬಲೇಶ್ವರ ಹಾಗೂ ಅಲ್ಲಿನ ಪರಿವಾರ ದೇವರ ಗುಡಿಗಳನ್ನೂ ಕಾಯಿದೆಯ ವ್ಯಾಪ್ತಿಗೆ ತಪ್ಪಾಗಿ ಒಳಪಡಿಸಿ ಅಧಿಸೂಚನೆ ಹೊರಡಿಸಲಾಯಿತು. ಇತ್ತ ೧೨ನೇ ಯತಿಗಳ ಕಾಲದಲ್ಲೇ, ಅಂದರೆ ೧೬ನೇ ಶತಮಾನದಲ್ಲೇ ಗೋಕರ್ಣದಿಂದ ರಾಮ ಚಂದ್ರಾಪುರಕ್ಕೆ ಸ್ಥಳಾಂತರಗೊಂಡಿದ್ದ ಶ್ರೀರಾಮಚಂದ್ರಾಪುರ ಮಠ ದೇವಾಲಯದ ಮೇಲೆ ನಿಯಂತ್ರಣ ಹೊಂದಿದ್ದರೂ ೧೯೫೦ರ ಕಾಯಿದೆಯಿಂದಾದ ತಪ್ಪನ್ನು ಸರಿಪಡಿಸಲು ಅಷ್ಟಾಗಿ ಪ್ರಯತ್ನಿಸಲಿಲ್ಲ. ಹಾಗಾಗಿ ದೇವಾಲಯ ಮಠಕ್ಕೆ ಬದಲು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿತು. ಅರ್ಚನೆ ಮಾಡಿಕೊಂಡು ಬರುತ್ತಿದ್ದ ಉಪಾಧಿವಂತರನ್ನೇ ದೇವಾಲಯದ ಟ್ರಸ್ಟಿಗಳಾಗಿ ನೇಮಕ ಮಾಡಲಾಯಿತು. ಇವರ ನೇಮಕಕ್ಕೆ ಮಠದ ಅಸ್ತು ಕೂಡ ದೊರಕಿತ್ತು. ಆದರೆ ಮಠದ ನಿರ್ಲಕ್ಷ್ಯ ಹಾಗೂ ಕಾಯಿದೆಯಿಂದಾಗಿ ತಪ್ಪಿದ ನಿಯಂತ್ರಣದಿಂದಾಗಿ ಮಠಕ್ಕೆ ಅಧೀನವಾಗಿ ನಡೆದುಕೊಳ್ಳುವ ವಿಧಿವಿಧಾನಗಳು ಹೆಸರಿಗಷ್ಟೇ ಮುಂದುವರಿದುಕೊಂಡು ಹೋಗಿ ಕಾಲಾಂತರದಲ್ಲಿ ಉಪಾಧಿವಂತರೇ ಗೋಕರ್ಣದ ಬಾಸ್‌ಗಳಾದರು. ೧೯೫೭ರಲ್ಲಿ ದೇವಾಲಯದ ಟ್ರಸ್ಟಿ ದಾಮೋದರ ದತ್ತಾತ್ರೇಯ ದೀಕ್ಷಿತರು ತೀರಿಕೊಂಡ ನಂತರ ಮತ್ತೆ ಅರ್ಚನೆಯ ಪ್ರಶ್ನೆ ಎದುರಾಯಿತು. ತಮ್ಮ ತಂದೆಯ ಮರಣದಿಂದಾಗಿ ತೆರವಾಗಿರುವ ಸ್ಥಾನವನ್ನು ತನಗೇ ನೀಡಬೇಕೆಂದು ದಾಮೋದರ ದತ್ತಾತ್ರೇಯ ಅವರ ಪುತ್ರ ವಿಘ್ನೇಶ್ವರ ದಾಮೋದರ ದೀಕ್ಷಿತ್ ೧೯೫೦ರ ಬಾಂಬೆ ದತ್ತಿ ಕಾಯಿದೆಯ ಸೆಕ್ಷನ್ ೪೭ರ ಅಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಘ್ನೇಶ್ವರ ದೀಕ್ಷಿತರನ್ನು ಟ್ರಸ್ಟಿಯಾಗಿ ನೇಮಕ ಮಾಡಿತು. ದೇವಾಲಯದ ಏಕಮಾತ್ರ ಜೀವಂತ ಟ್ರಸ್ಟಿಯಾಗಿದ್ದ ಅವರು ೨೦೦೪ರಲ್ಲಿ ವಿಧಿವಶರಾದಾಗ ಅವರ ಪುತ್ರ ಬಾಲಚಂದ್ರ ದೀಕ್ಷಿತ್ ದೇವಾಲಯ ತಮ್ಮ ಪಿತ್ರಾರ್ಜಿತ ಆಸ್ತಿಯೆಂಬಂತೆ ಹಕ್ಕುಪ್ರತಿಪಾದಿಸಿದರು. ಇವರ ಮಾತಿಗೆ ಕೋರ್ಟಿನಲ್ಲಿ ಕಿಮ್ಮತ್ತು ಸಿಗಲಿಲ್ಲ. ಅಷ್ಟಕ್ಕೂ “೧೯೯೭ರ ಕರ್ನಾಟಕ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಕಾಯಿದೆ” ಜಾರಿಗೆ ಬಂದ ನಂತರ ೧೯೫೦ರ ಬಾಂಬೆ ದತ್ತಿ ಕಾಯಿದೆ ಅರ್ಥ ಕಳೆದುಕೊಂಡು, ಕರ್ನಾಟಕಕ್ಕೆ ಅನ್ವಯವಾಗುತ್ತಿಲ್ಲ. ೧೯೯೭ರ ಕಾಯಿದೆಯ ಸೆಕ್ಷನ್ ೧(೪)ಮಠಗಳು ಹಾಗೂ ಮಠಗಳಿಗೆ ಸೇರಿದ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಈ ಬಗ್ಗೆ ಎಚ್ಚೆತ್ತುಕೊಂಡ ಗೋಕರ್ಣದ ಸ್ಥಳೀಯರು ಹಾಗೂ ಶ್ರೀರಾಮಚಂದ್ರಾಪುರ ಮಠದ ೩೬ನೇ ಯತಿಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿಗಳು ೫೮ ವರ್ಷಗಳ ಹಿಂದೆ ಆದ ತಪ್ಪನ್ನು ಸರಿಪಡಿಸಿ, ದೇವಾಲಯವನ್ನು ಅಧಿಸೂಚನೆಯ ವ್ಯಾಪ್ತಿಯಿಂದ ಹೊರಗಿಟ್ಟು ಮಠಕ್ಕೆ ಒಪ್ಪಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪನವರ ಸರಕಾರ ಆಗಸ್ಟ್ ೧೨ರಂದು ದೇವಾಲಯದ ಆಡಳಿತ ವನ್ನು ಶ್ರೀರಾಮಚಂದ್ರಾಪುರ ಮಠದ ಸುಪರ್ದಿಗೆ ನ್ಯಾಯ ಸಮ್ಮತವಾಗಿ ಒಪ್ಪಿಸಿದೆ. ಸರಕಾರದ ಈ ನಿರ್ಧಾರದಿಂದಾಗಿ ಒಂದು ರೀತಿಯಲ್ಲಿ “Floodgates” ತೆರೆದಂತಾಗಿದೆ. ಇತರ ಮಠಗಳೂ ಕೂಡ ಸರಕಾರದ ಈ ಆದೇಶವನ್ನು ಆಧಾರವಾಗಿಟ್ಟುಕೊಂಡು ಪರಂಪರಾಗತವಾಗಿ ತಮಗೆ ಸೇರಬೇಕಾಗಿರುವ, ಆದರೆ ಈಗ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ದೇವಾಲಯಗಳನ್ನು ಮರಳಿ ತಮಗೆ ನೀಡುವಂತೆ ಹಕ್ಕು ಪ್ರತಿಪಾದನೆ ಮಾಡಬಹುದು. ಮಠಗಳು ದೇವಾಲಯಗಳ ಆಡಳಿತವನ್ನು ಕೈಗೆತ್ತಿಕೊಂಡರೆ ತೀರ್ಥಕ್ಷೇತ್ರಗಳ ಅಭಿವೃದ್ಧಿಯೂ ಆಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು “ಧರ್ಮೋ ತ್ಥಾನ ಟ್ರಸ್ಟ್” ಸ್ಥಾಪಿಸಿ ಶಿಥಿಲಗೊಂಡಿರುವ ದೇವಾಲಯಗಳ ಜೀರ್ಣೋದ್ಧಾರದಂತಹ ಮಹತ್ಕಾರ್ಯ ಮಾಡುತ್ತಿದ್ದಾರೆ. ಆದಿ ಚುಂಚನಗಿರಿ ಸ್ವಾಮೀಜಿಯವರು ನಿರ್ಮಿಸಿರುವ ಕಾಲಭೈರವೇಶ್ವರ ದೇವಾಲಯವಂತೂ ಎಲ್ಲರ ಹುಬ್ಬೇರಿಸು ವಂತಿದೆ. ನಮ್ಮ ದೇವಾಲಯಗಳ ಮೇಲಿನ ನಿಯಂತ್ರಣ ಮಠಗಳಿಗೆ ದೊರೆತರೆ ಮುಜರಾಯಿ ಇಲಾಖೆ ಸೇರಿ ಮಸೀದಿ, ಚರ್ಚ್ ಅಭಿವೃದ್ಧಿಯ ಪಾಲಾಗುತ್ತಿದ್ದ ಹುಂಡಿ ಹಣ ದೇವಾಲಯಗಳ ಅಭಿವೃದ್ಧಿಯಂತಹ ಕಾರ್ಯಕ್ಕೆ ಸದ್ವಿನಿಯೋಗವೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಗೋಕರ್ಣ ದೇವಾಲಯವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಹಸ್ತಾಂ ತರ ಮಾಡಿರುವುದನ್ನು ಧರ್ಮದ ಬಗ್ಗೆ ಕಾಳಜಿ ಇರುವ ನಾಡಿನ ಎಲ್ಲ ಗಣ್ಯರೂ ಸ್ವಾಗತಿಸಬೇಕು.

ಆದರೆ ಗೋಕರ್ಣದ ಅರ್ಚಕರು ಸುಮ್ಮನಿರುತ್ತಾರೆಯೇ?!

ಮಹಾಬಲೇಶ್ವರ ದೇವಾಲಯ ತಮ್ಮ ಆಸ್ತಿ ಎಂಬಂತೆ ಬೊಬ್ಬೆ ಹಾಕಲಾರಂಭಿಸಿದ್ದಾರೆ. ವಿಷಯದ ಸತ್ಯಾಸತ್ಯತೆಯನ್ನು ಸರಿಯಾಗಿ ಅರಿಯದ ಹಾಗೂ ಅರಿತರೂ ಕಲಹ ತಂದಿಡುವ ಉದ್ದೇಶದಿಂದ ಕೆಲವರು ಬೊಬ್ಬೆ ಹಾಕುತ್ತಿರುವವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಆದರೆ ಉಡುಪಿಯ ಶ್ರೀಕೃಷ್ಣ ಪೇಜಾವರ ಮಠಕ್ಕೆ ಹೇಗೋ, “ಲಕ್ಷ್ಮಿ”ಯಾಗಿರುವ ಶಾರದೆ ಶೃಂಗೇರಿ ಮಠಕ್ಕೆ ಹೇಗೋ ಹಾಗೆಯೇ ಗೋಕರ್ಣದ ದೇವಾಲಯದ ಮೇಲೆ ಶ್ರೀರಾಮಚಂದ್ರಾಪುರಕ್ಕೂ ಹಕ್ಕಿದೆ. ಹಾಗಂತ ದುಡ್ಡು ಮಾಡುವ ಉದ್ದೇಶದಿಂದ ರಾಘವೇಶ್ವರ ಭಾರತೀ ಅವರು ಯಾರಿಗೋ ಸೇರಿದ್ದ ದೇವಾಲಯವನ್ನು ನಮಗೆ ನೀಡಿ ಎಂದು ಕೇಳಿಕೊಂಡಿರಲಿಲ್ಲ. ಮಠಕ್ಕೆ ಸೇರಿ ರುವ ದೇವಾಲಯಕ್ಕೆ ಅಂಟಿಕೊಂಡಿರುವ ಕೊಳೆಯನ್ನು ತೊಳೆ ಯುವ ಉದ್ದೇಶದಿಂದ ಹಕ್ಕು ಪ್ರತಿಪಾದನೆ ಮಾಡಿದ್ದಾರೆ.

ಇದರಲ್ಲಿ ತಪ್ಪೇನಿದೆ?
ನೀವೇ ಹೇಳಿ, ಈಗಿರುವ ಪರಿಸ್ಥಿತಿಯಲ್ಲಿ ಗೋಕರ್ಣ ವೆಂದರೆ ನಿಮಗೆ ಭಕ್ತಿ ಮೂಡುತ್ತದೋ ಆಥವಾ ಓಂ ಬೀಚ್‌ನ ಬಿಕಿನಿಗಳು ನೆನಪಾಗುತ್ತವೋ? ಒಂದು ದೇವಸ್ಥಾನ ಶಿಥಿಲಗೊಂಡರೆ ಅದರ ಜೀರ್ಣೋದ್ಧಾರ ಕಾರ್ಯವನ್ನು ಮಾಡಬೇಕಾಗುತ್ತದೆ. ಇಂದು ಇಡೀ ಗೋಕರ್ಣದ ಮಹಾ ಬಲೇಶ್ವರ ದೇವಾಲಯ, ಅದರ ಸುತ್ತಲಿನ ಪರಿಸರ ಮಾತ್ರವಲ್ಲ, ಅರ್ಚನೆಯಲ್ಲಿ ತೊಡಗಿರುವವರ ಮನಸ್ಸುಗಳ ಜೀರ್ಣೋದ್ಧಾರ ಕಾರ್ಯವೂ ಆಗಬೇಕಾಗಿದೆ. ಅಷ್ಟಕ್ಕೂ ನಾವು ನಮ್ಮ ವಿಶ್ವಾಸದ ಗಂಟನ್ನು ಇಟ್ಟಿರುವುದೇ ಮಠ, ಮಂದಿರಗಳಲ್ಲಿ. ಅಂತಹ ಸ್ಥಳಗಳೇ ರೇಜಿಗೆ ಹುಟ್ಟಿಸುವ ತಾಣಗಳಾದರೆ ಜನರಿಗೆ ದೇವರ ಮೇಲಿನ ವಿಶ್ವಾಸವೇ ಹೊರಟು ಹೋಗದೇ ಇದ್ದೀತೆ? ಮಂಗಳಾರತಿ ತಟ್ಟೆಯ ಮೇಲೆ ಹಾಕಿದ್ದು ನೋಟೋ, ನಾಣ್ಯವೋ ಎಂಬುದನ್ನು ನೋಡಿ ಪ್ರಸಾದ ನೀಡುವ ಅರ್ಚಕರಿಂದಾಗಿ ಕೆಲವು ದೇವಾಲಯಗಳ ಬಗ್ಗೆ ನಮಗೆ ಕಸಿವಿಸಿಯಾಗಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ರಾಘವೇಶ್ವರ ಭಾರತೀ ಅವರು ಗೋಕರ್ಣದ ಕಡಲ ಕಿನಾರೆಯ ಕೊಳೆ ತೊಳೆದು ಶುದ್ಧೀಕರಣ ಮಾಡಲು ಹೊರಟಿದ್ದಾರೆ. ಆದರೂ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಒಂದು ವೇಳೆ ರಾಘವೇಶ್ವರರಿಗೆ ದುಡ್ಡು ಮಾಡುವ ಹಂಬಲವಿದ್ದಿದ್ದರೆ ರಾಮಚಂದ್ರಾಪುರದ ಹಟ್ಟಿಯಲ್ಲಿ ದನಕರುಗಳ ಬದಲು ಒಂದೆರಡು ಇಂಜಿನಿಯ ರಿಂಗ್, ಮೆಡಿಕಲ್ ಕಾಲೇಜುಗಳೆಂಬ ‘ಕಾಮ ಧೇನು’ಗಳನ್ನು ಕಟ್ಟುತ್ತಿದ್ದರು. ಅವರ ಸಾಮಾಜಿಕ ಕಾಳಜಿ ಈಗಾಗಲೇ ಸಾಬೀತಾಗಿದೆ. ಇಲ್ಲದಿದ್ದರೆ ಗೋಮಾತೆಯ ಮಹತ್ವವನ್ನು ಸಾರುವ ಪ್ರತಿಫಲವಿಲ್ಲದ ಕೆಲಸಕ್ಕೆ ಅವರು ಕೈಹಾಕುತ್ತಿರಲಿಲ್ಲ. ಇವತ್ತು ನಾಸ್ತಿಕವಾದಿ ಕಮ್ಯುನಿಸ್ಟರ ಕೇರಳದಲ್ಲಿ ಅಕ್ಕರೆಯ ಅಪ್ಪುಗೆಯ ಮೂಲಕ ದೇವರ ಮೇಲಿನ ವಿಶ್ವಾಸವನ್ನು ಗಟ್ಟಿಗೊಳಿಸುತ್ತಿರುವ ‘ಅಮ್ಮಾ’, ಆಧ್ಯಾತ್ಮದ ಮೂಲಕ ಜನರಿಗೆ ಮನಃಶಾಂತಿ ನೀಡುತ್ತಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ, ಯೋಗದ ಮೂಲಕ ಆರೋಗ್ಯಯುತ ಜೀವನ ಮತ್ತು ಆಧ್ಯಾತ್ಮದತ್ತ ನಮ್ಮನ್ನು ಕರೆದೊಯ್ಯುತ್ತಿರುವ ಬಾಬಾ ರಾಮದೇವ್, ಆಮಿಷಗಳಿಗೊಳಗಾಗಿ ಮತಾಂತರಗೊಂಡಿರುವವರನ್ನು “ಶಬರಿ ಕುಂಭ’ದಲ್ಲಿ ಮೀಯಿಸಿ ಮರಳಿ ಮಾತೃಧರ್ಮಕ್ಕೆ ಕರೆತರುತ್ತಿರುವ ಆಶಾರಾಮ್ ಬಾಪು ಮುಂತಾದವರು ಅಪ್ರತಿಮ ಸೇವೆ ಮಾಡುತ್ತಿದ್ದಾರೆ. ನಾವು ತಾಯಿಯ ನಂತರ ಸ್ಥಾನವನ್ನು ನೀಡಿರುವ ಗೋಮಾತೆಯ ಬಗ್ಗೆ ಅರಿವು ಮೂಡಿಸುತ್ತಿರುವ ರಾಘವೇಶ್ವರ ಭಾರತೀ ಸ್ವಾಮಿಗಳು ಮಾಡುತ್ತಿರುವುದೂ ಆ ರೀತಿಯ ಸೇವೆ ಮತ್ತು ಧರ್ಮಸಂಸ್ಥಾಪನಾ ಕಾರ್ಯವನ್ನೇ. ಅಂತಹವರ ಸುಪರ್ದಿಗೆ ಗೋಕರ್ಣದ ದೇವಾಲಯವನ್ನು ನೀಡಿದರೂ ವಿರೋಧಿಸುತ್ತಾರಲ್ಲಾ…

ಹೇ ಆದಿಶಂಕರಾ!

Monday, September 15, 2008

ಗೋವಿನ ಸುತ್ತ... ಮುಗಿಯದ ವೃತ್ತ

ಕೃಪೆಃ ಶ್ರೀ ಡಾ. ಯು.ಬಿ ಪವನಜ ಅವರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ "ಗೋವಿಶ್ವ" ಈ-ಪತ್ರಿಕೆಯಿಂದ.

ಬಾಯಲ್ಲಿ ಚ್ಯೂಯಿಂಗ್ ಗಮ್ ಅಗಿಯುತ್ತ ನೀವು ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಮಬ್ಬುಗತ್ತಲಲ್ಲಿ ವೇಗವಾಗಿ ಕಾರಿನಲ್ಲಿ ಧಾವಿಸುತ್ತೀದ್ದೀರಿ. ಎದುರಿಗೆ ಏನೋ ಅಸ್ಪಷ್ಟ ಆಕೃತಿ ಕಂಡಂತಾಗಿ ಹಠಾತ್ ಬ್ರೇಕ್ ಹಾಕುತ್ತೀರಿ. ಕಿರ್ರೆಂದು ಕಿರುಚುತ್ತ ಕಾರಿನ ಚಕ್ರಗಳು ರಸ್ತೆಯ ನಡುವೆ ಮಲಗಿರುವ ಹಸುವಿನ ಒಂದಡಿ ದೂರದಲ್ಲಿ ನಿಲ್ಲುತ್ತವೆ. ಅಬ್ಬ, ಪುಣ್ಯಕೋಟಿಯ ಪುಣ್ಯ ಎಂದುಕೊಂಡು ನೀವು ಮೆಲ್ಲನೆ ಸುತ್ತು ಬಳಸಿ, ನಗರ ಸಭೆಯ ಆಡಳಿತವನ್ನು ಬಯ್ದುಕೊಳ್ಳುತ್ತ ಮುಂದೆಸಾಗುತ್ತೀರಿ.

ಆ ಹಸುವಿನ ಪ್ರಾಣ ಉಳಿಸಲು ಕಾರಣವಾಗಿದ್ದು ನಿಮ್ಮ ಕಾರಿನ ದಕ್ಷ ಬ್ರೇಕ್. ಅದು ಅಷ್ಟು ದಕ್ಷತೆಯಿಂದ ಕೆಲಸ ಮಾಡಲು ಕಾರಣ ಏನೆಂದರೆ ಅದರಲ್ಲಿರುವ ಬ್ರೇಕ್ ಫ್ಲುಯಿಡ್. ಅಂದರೆ, ಬ್ರೇಕ್ ಸಿಲಿಂಡರಿನಲ್ಲಿ ತುಂಬಿಕೊಂಡಿರುವ ಎಣ್ಣೆಯಂಥ ದ್ರವ. ಆ ದ್ರವ ತಯಾರಾಗಿದ್ದು ಅದೆಷ್ಟು ಮೃತ ದನಗಳ ಶರೀರದಿಂದ ಪಡೆದ ಕೊಬ್ಬಿನ ಆಮ್ಲ. ಇಂದು ಜೀವಂತ ದನವನ್ನು ಉಳಿಸಿದ್ದು ಎಂದೋ ಸತ್ತು ಹೋದ ಇನ್ಯಾವುದೋ ದನ!

ಕಾರು ಆ ಕ್ಷಣದಲ್ಲಿ ನಿಲ್ಲಲು ಬ್ರೇಕ್ ಎಣ್ಣೆಯೊಂದೇ ಕಾರಣವಲ್ಲ, ಕಾರಿನ ಟಯರ್ ಕೂಡ ಅಷ್ಟು ಮುಖ್ಯ ಅಂತೀರಾ? ಹೌದು. ಆದರೆ ಕಾರಿನ ರಬ್ಬರಿಗೆ ವಿಶೇಷ ಹಿಡಿತಗುಣ ಬರುವಂತೆ ಮಾಡುವಲ್ಲಿ ಸ್ಟೀಯರಿಕ್ ಆಸಿಡ್ ಎಂಬ ರಸಾಯನವನ್ನು ಸೇರಿಸಿರುತ್ತಾರೆ. ಅದನ್ನು ದನದ ಕೊಬ್ಬಿನ ಎಣ್ಣೆಯಿಂದಲೇ ತಯಾರಿಸಿರುತ್ತಾರೆ. ಸರಿ! ಬ್ರೇಕು, ಟಯರು.... ಇನ್ನೇನು ರಸ್ತೆಗೆ ಹಾಕಿದ ಡಾಂಬರಿನಲ್ಲೂ ದನದ ಅಂಶ ಇದೆ ಅಂತೀರೇನೊ ಎಂದು ರೇಗಿ ಹೊರಡಬೇಡಿ. ನಂಬಿದರೆ ನಂಬಿ, ರಸ್ತೆಗೆ ಹಾಕುವ ಟಾರ್‌ನಲ್ಲೂ ದನದ ಕೊಬ್ಬನ್ನು ಸೇರಿಸಿರುತ್ತಾರೆ!

ನಿಲ್ಲಿ ಇಲ್ಲಿಗೇ ನಿಂತಿಲ್ಲ.

ಮತ್ತೆ ನೀವು ಅಗಿಯುತ್ತಿದ್ದ ಚ್ಯೂಯಿಂಗ್ ಗಮ್ ಕೂಡ ಅಂಥದೇ ಮೃತ ದನದ ದೇಹದಿಂದ ಪಡೆದ ಕೊಲಾಜೆನ್ ಎಂಬ ದ್ರವ್ಯದ್ದೇ ಆಗಿದ್ದಿರಬಹುದು. ಅದರಲ್ಲಿ ವೆನಿಲ್ಲಾ ಸುಗಂಧವೂ ಇದ್ದರಂತೂ ಬಿಡಿ. ಮೊನ್ನೆ ತಾನೇ ಸುದ್ದಿಯಲ್ಲಿತ್ತಲ್ಲ, ಜಪಾನೀ ವಿಜ್ಞಾನಿಯೊಬ್ಬಳು ದನದ ಸೆಗಣಿಯನ್ನೇ ಸಂಸ್ಕರಿಸಿ ಕೃತಕ ವೆನಿಲ್ಲಾ ಪರಿಮಳವನ್ನು ಪಡೆಯಲು ಸಾಧ್ಯವೆಂದು ತೋರಿಸಿದ್ದು? ಆಕೆಗೆ ಆ ಸಾಧನೆಗೆ ‘ಇಗ್ ನೊಬೆಲ್’ ಪ್ರಶಸ್ತಿ ಸಿಕ್ಕಿದ್ದು?

ಇದು ಬರೀ ಆರಂಭ ಅನ್ನಿ. ಇಂದಿನ ಕೈಗಾರಿಕೆಯ ಯುಗದಲ್ಲಿ ಗೋಪುರಾಣ ಎಂಬುದು ಹೇಳಿದμ ಮುಗಿಯಲಾರದಷ್ಟಿದೆ. ಎಲ್ಲಿಂದ ಆರಂಭಿಸೋಣ? ಗೋವು ಬದುಕಿದ್ದಾಗ ಏನೆಲ್ಲ ಉಪಕಾರ ಮಾಡುತ್ತದೆಂದು ನಮಗೆ ಗೊತ್ತು. ಅದರ ಚರ್ವಿತ ಚರ್ವಣ ಬೇಡ. ಪಾಶ್ಚಾತ್ಯ ದೇಶಗಳಲ್ಲಿ ಗೋಸಂಗೋಪನೆ ಎಂಬುದು ಒಂದು ದೊಡ್ಡ ಉದ್ಯಮವಾಗಿದೆ. ಒಂದೊಂದು ರ್‍ಯಾಂಚ್‌ನಲ್ಲಿ ಅನೇಕ ಸಾವಿರ ದನಗಳಿರುತ್ತವೆ. ಅಮೆರಿಕದ ಡಿಮಾಯ್ನ್ ನಗರದ ಹೊರವಲಯದಲ್ಲಿ ನಾನು ಭೇಟಿ ನೀಡಿದ್ದ ಒಂದು ರ್‍ಯಾಂಚ್‌ನಲ್ಲಿ ಮೂರುವರೆ ಸಾವಿರ ದನಗಳಿದ್ದವು. ಅಲ್ಲಿ ದಿನವೂ ನೂರಾರು ಗರ್ಭಿಣಿ ದನಗಳು ಕರು ಹಾಕುತ್ತಿರುತ್ತವೆ. ಆಗ ಗರ್ಭದಿಂದ ಹೊರ ಬೀಳುವ ಸೆತ್ತೆಗಳನ್ನು ಸಂಗ್ರಹಿಸಿ ಅದರಿಂದ ನಾನಾ ಬಗೆಯ ಔಷಧ ದ್ರವ್ಯಗಳನ್ನೂ ಶೃಂಗಾರ ಪರಿಕರಗಳನ್ನೂ ತಯಾರಿಸುತ್ತಾರೆ. ಅದನ್ನೂ ನಾವಿಲ್ಲಿ ಚರ್ಚೆಗೆ ಎತ್ತಿಕೊಳ್ಳುವುದು ಬೇಡ.

ದನವೊಂದು ಸತ್ತ ನಂತರ ಏನೇನು ಸಿಗುತ್ತದೆ ಎಂಬಲ್ಲಿಂದ ನೋಡೋಣ:
‘ಬಳಸಿದ್ದನ್ನೇ ಮತ್ತೆ ಬಳಸಿ; ಬಿಸಾಕುವ ಬದಲು ಮರುಬಳಕೆ ಮಾಡಿ’ ಎಂಬುದು ವೇದ ಮಂತ್ರದಷ್ಟು ಮಹತ್ವದ ಸಂದೇಶವಾಗುತ್ತಿರುವ ಯುಗದಲ್ಲಿ ನಾವಿದ್ದೇವೆ. ಅಂಥ ಮರುಬಳಕೆಯ ಪರಮೋಚ್ಚ ಉದಾಹರಣೆ ಎಂದರೆ ನಾವು ಹಿಂದೂಗಳು ಪೂಜಿಸುವ ಗೋವು. ಭಾರತದ ಸಾಂಪ್ರದಾಯಿಕ ಸಮುದಾಯದಲ್ಲಿ ಗೋವುಗಳ ಮರುಬಳಕೆ ಎಂದರೆ ನಮಗೆ ಗೊತ್ತಿರುವುದು ಇಷ್ಟು: ಒಂದು ಹಸು ಅಥವಾ ಎತ್ತು ಸತ್ತರೆ ಅದರ ಚರ್ಮವನ್ನು ಸುಲಿದು ಯಾರೋ ಪಾದರಕ್ಷೆ, ಬೆಲ್ಟ್ ಇತ್ಯಾದಿ ಮಾಡಲೆಂದು ಒಯ್ಯುತ್ತಾರೆ. ದನಗಳ ಗೊರಸು, ಕೋಡುಗಳಿಂದಲೇ ‘ಜೆಲ್ಲಿ’ ಎಂಬ ಅಂಟು ಪದಾರ್ಥವನ್ನು ತಯಾರಿಸುತ್ತಾರೆ ಅನ್ನೋದು ಗೊತ್ತಿತ್ತು. ಅದು ಬಿಟ್ಟರೆ ಈಚೆಗೆ ಬೆಂಗಳೂರಿನ ಬಳಿ ಎಲ್ಲೋ ‘ಬೋನ್ ಮೀಲ್’ ಎಂಬ ಫ್ಯಾಕ್ಟರಿ ಆರಂಭವಾಗಿದೆಯಂತೆ; ಅದರಲ್ಲಿ ದನಗಳ ಮೂಳೆಯನ್ನು ಪುಡಿಮಾಡಿ ಗೊಬ್ಬರಕ್ಕೋ ಇನ್ಯಾವುದಕ್ಕೊ ಬಳಸುತ್ತಾರಂತೆ. ಅದಂತೆ ಇದಂತೆ.

ಅಲ್ಲಿಂದಾಚೆ ಏನು?
ಇಂಗ್ಲಂಡಿನಲ್ಲಿ ದನಗಳಿಗೆ ಸಿಜೆಡಿರಿ ಅಂದರೆ ರಿಹುಚ್ಚು ಹಸು ರೋಗರಿ ಕಾಣಿಸಿಕೊಂಡಾಗ ಅದೆಂಥದೊ ಮಹಾ ಪಿಡುಗು ಬಂದಂತೆ ಪಾಶ್ಚಾತ್ಯ ಜಗತ್ತು ತತ್ತರಿಸಿತು. ಗೋಮಾಂಸವನ್ನು ತಿಂದ ಕೆಲವರು ಅದೇ ರೋಗದಿಂದ ನರಳಿ ಸತ್ತಿದ್ದೂ ಬೆಳಕಿಗೆ ಬಂತು. ಅದಕ್ಕೇ ಆರೆಂಟು ಲಕ್ಷ ಗೋವುಗಳನ್ನು ವಧೆ ಮಾಡಿ, ಜಗತ್ತಿಗೆಲ್ಲ ಗೊತ್ತಾಗುವಂತೆ ಟಿವಿ ಕ್ಯಾಮರಾ ಎದುರೇ ಸುಟ್ಟು ಹೂಳಲಾಯಿತು. ಇಂದು ದನವನ್ನು ಬೇರೆ ಯಾವ ಯಾವ ರೂಪಗಳಲ್ಲಿ ನಾವು ಬಳಸುತ್ತಿದ್ದೇವೆ ಎಂಬುದರ ಉದ್ದುದ್ದ ಪಟ್ಟಿಗಳೇ ಆ
ಸಂದರ್ಭದಲ್ಲಿ ಚರ್ಚೆಗೆ ಬಂದವು. ಅವುಗಳಿಂದ ಸಂಗ್ರಹಿಸಿದ ಮಾಹಿತಿಗಳಲ್ಲಿ ಕೆಲವು ಮಾತ್ರ ಇಲ್ಲಿವೆ:

ಉದಾಹರಣೆಗೆ, ದನಗಳ ಶ್ವಾಸಕೋಶ ಮತ್ತು ಶ್ವಾಸನಾಳದ ಒಳ ಪೊರೆಯಿಂದ ಹೆಪಾರಿನ್ ಎಂಬ ಔಷಧವನ್ನು ತಯಾರಿಸುತ್ತಾರೆ. ರಕ್ತ ಗರಣೆಗಟ್ಟದ ಹಾಗೆ ತಡೆಯಲು, ವಿಶೇಷವಾಗಿ ಗ್ಯಾಂಗ್ರೀನ್ ಆಗದಂತೆ ತಡೆಯಲು ಈ ಔಷಧ ಬಳಕೆಯಾಗುತ್ತದೆ. ದನದ ಅಡ್ರಿನಾಲಿನ್ ಗ್ರಂಥಿಗಳಿಂದ ಸ್ಟಿರಾಯಿಡ್‌ಗಳನ್ನು ತೀವ್ರ ಅಸ್ತಮಾದಂಥ ಕಾಯಿಲೆಗಳ ಉಪಶಮನಕ್ಕೆ ಬಳಸುತ್ತಾರೆ. ಇದೇ ಗ್ರಂಥಿಗಳಿಂದ ಎಪಿನೆಫ್ರಿನ್ ಎಂಬ ಔಷಧವನ್ನು ಉತ್ಪಾದಿಸಿ ಅದನ್ನು ರಕ್ತದ ಒತ್ತಡವನ್ನು ಹೆಚ್ಚಿಸಲು ಬಳಸುತ್ತಾರೆ. ಹೃದ್ರೋಗ ಚಿಕಿತ್ಸೆಗಂತೂ ಇದು ಬೇಕೇ ಬೇಕು. ದನದ ಯಕೃತ್ತಿನಿಂದ ಬಿ- ೧೨, ಲಿವರ್ ಎಕ್ಸ್‌ಟ್ರ್ಯಾಕ್ಟ್ ಔಷಧಗಳು ತಯಾರಾಗುತ್ತವೆ. ಹಾಗೆಯೇ ಮಧುಮೇಹಿಗಳಿಗೆ ಬೇಕಾದ ಇನ್ಸೂಲಿನ್ನನ್ನು ದನಗಳ ಮೇಧೋಜೀರಕ ಗ್ರಂಥಿಗಳಿಂದ ಪಡೆಯಲಾಗುತ್ತದೆ. ಇನ್ನು ಕೀಲುನೋವು, ಸಂಧಿವಾತದಿಂದ ಬಳಲುವವರಿಗೆ ಕೊಡುವ ಕೊಂಡ್ರಾಯಿಟಿನ್ ಸಲ್ಫೇಟ್ ಎಂಬ ಔಷಧವನ್ನು ದನದ ಮೂಗಿನ ಹೊರಳೆಗಳ ನಡುವಣ ಮೃದ್ವಸ್ಥಿಯಿಂದಲೇ ತಯಾರಿಸುತ್ತಾರೆ. ದನದ ಮಿದುಳಿನ ದಟ್ಟ ನಾರಿನಂಥ ಹೊರಗವಚವನ್ನು (ಡ್ಯುರಾ ಮೇಟರ್) ಮನುಷ್ಯರ ಮಿದುಳಿನ ಶಸ್ತ್ರಚಿಕಿತ್ಸೆ ಮಾಡುವಾಗ ತಲೆಬುರುಡೆಯ ಖಾಲಿ ಜಾಗವನ್ನು ತುಂಬಲು ಬಳಸಲಾಗುತ್ತದೆ.

ದನದ ಕರುಳನ್ನು ಉಪ್ಪಿನಲ್ಲಿ ಒಣಗಿಸಿ ಕೊಳವೆಯಂತೆ ಕತ್ತರಿಸಿ ಅದರಲ್ಲಿ ಮಸಾಲೆ ಮಾಂಸ ತುಂಬಿ ಕರಿದು ‘ಸಾಸೇಜ್’ ಎಂಬ ತಿಂಡಿಯನ್ನು ತಯಾರಿಸಲಾಗುತ್ತದೆ. ಕರುಳನ್ನು ದಾರದಂತೆ ಸೀಳಿ, ಗಾಯಕ್ಕೆ ಹೊಲಿಗೆ ಹಾಕುವ ದಾರವನ್ನಾಗಿ ಬಳಸಲಾಗುತ್ತದೆ.
ದನಗಳ ಪಿತ್ತಕೋಶದ ಕಲ್ಲುಗಳನ್ನು ಪಾಲಿಶ್ ಮಾಡಿ ಆಭರಣ ತಯಾರಕರು ಹರಳುಗಳಂತೆ ಕೂರಿಸುತ್ತಾರೆ. ಪ್ಲೈವುಡ್‌ನಲ್ಲಿ ಕಟ್ಟಿಗೆಯ ತೆಳು ಹಾಳೆಗಳನ್ನು ಅಂಟಿಸಲು ದನಗಳ ರಕ್ತವನ್ನು ಗೋಂದಿನಂತೆ ಸಾಂದ್ರೀಕರಿಸಿ ಬಳಸುತ್ತಾರೆ. ಕಟ್ಟಡಗಳಿಗೆ ಬೆಂಕಿ ಬಿದ್ದಾಗ ಉಪಯೋಗಿಸುವ ಅಗ್ನಿಶಾಮಕ ನೊರೆಯನ್ನೂ ದನಗಳ ರಕ್ತದ ಪುಡಿಯಿಂದಲೇ ತಯಾರಿಸಲಾಗುತ್ತದೆ. ಮಿಕ್ಕಿದ ಪುಡಿ ರಸಗೊಬ್ಬರದ ಉತ್ಪಾದನೆಗೆ ಹೋಗುತ್ತದೆ. ಕೃಷಿ ಕೆಲಸದಲ್ಲಿ ದುಡಿಯುವ ಮಹಿಳೆ ತೀರ ದುರ್ಬಲಳಾಗಿದ್ದರೆ ಅನೀಮಿಯಾ ಕಾಯಿಲೆ ಇದೆಯೆಂದು ಡಾಕ್ಟರು ಬರೆದುಕೊಡುವ ಐರನ್ ಟ್ಯಾಬ್ಲೆಟ್‌ಗೂ ದನದ ರಕ್ತವೇ ಮೂಲದ್ರವ್ಯ.

ದನಗಳ ಎಲುಬಿನ ಪುಡಿಯಿಂದಲೇ ಸಕ್ಕರೆಗೆ ಅಚ್ಚ ಬಿಳಿಬಣ್ಣ ಬರುತ್ತದೆ. ಪಿಂಗಾಣಿ ವಸ್ತುಗಳ ತಯಾರಿಕೆಯಲ್ಲೂ ಇದು ಬೇಕೇ ಬೇಕು. ಅತ್ಯಚ್ಚ ಗುಣಮಟ್ಟದ ವಿಶೇಷ ಉಕ್ಕಿನ ತಯಾರಿಕೆಗೆ ಮೂಳೆಪುಡಿಯನ್ನು ಸೇರಿಸಬೇಕಾಗುತ್ತದೆ. ಎಲುಬಿನಿಂದ ತಯಾರಿಸಲಾದ ಬಟನ್‌ಗಳಿಗೆ ಈ ಪ್ಲಾಸ್ಟಿಕ್ ಯುಗದಲ್ಲೂ ಬೇಡಿಕೆ ಇದೆ.

ದನಗಳ ಎಲುಬು ಮತ್ತು ಕೊಬ್ಬು ಎರಡರಿಂದಲೂ ರಿಟ್ಯಾಲೊರಿ ಎಂಬ ವಿಶೇಷ ಬಗೆಯ ಎಣ್ಣೆಯನ್ನು ತೆಗೆಯುತ್ತಾರೆ. ಭಕ್ಷಣೆಗೆ ಯೋಗ್ಯವಲ್ಲದ ಟ್ಯಾಲೊ ಎಣ್ಣೆಯನ್ನು ಬ್ರೇಕ್ ದ್ರವ ಮತ್ತು ಜೆಟ್ ವಿಮಾನಗಳ ಕೀಲೆಣ್ಣೆಯನ್ನು ಉತ್ಪಾದನೆಗೆ ಕಚ್ಚಾ ಪದಾರ್ಥವಾಗಿ ಬಳಸುತ್ತಾರೆ. ಮೋಂಬತ್ತಿಗೆ ಇದೇ ಮೂಲವಸ್ತು. ನಟನಟಿಯರು ಕೃತಕ ಕಣ್ಣೀರು ಹರಿಸಲೆಂದು ಬಳಿದುಕೊಳ್ಳುವ ಗ್ಲಿಸರೀನ್ ಕೂಡ ಇದೇ ಟ್ಯಾಲೊದಿಂದಲೇ ಬರುತ್ತದೆ. ಇದರಿಂದ ಸಾಬೂನು, ಡಿಟರ್ಜಂಟ್‌ಗಳೂ ತಯಾರಾಗುತ್ತವೆ. ವಿವಿಧ ಬಗೆಯ ಕಿವಿಗೆ ಹಾಕುವ ಹನಿಗಳು, ಕಣ್ಣಿಗೆ ಹಾಕುವ ಹನಿಗಳು, ಕೆಮ್ಮಿನ ಔಷಧಗಳು, ಹೇರ್ ಕಂಡೀಶನರ್‌ಗಳು, ಶಾಂಪೂಗಳು ಎಲ್ಲವಕ್ಕೂ ಗ್ಲಿಸರೀನೇ ಮೂಲದ್ರವ್ಯ. ಇದರಿಂದಲೇ ಬಣ್ಣ ಬಣ್ಣದ ಇಂಕು, ಕಾರುಗಳ ಪೇಂಟ್ ಮೇಲೆ ಹಚ್ಚುವ ಪಾಲಿಶ್‌ಗಳು, ಕಾರಿನ ಇಂಧನ ಚಳಿಯಲ್ಲೂ ಹೆಪ್ಪುಗಟ್ಟದಂತೆ ನೋಡಿಕೊಳ್ಳುವ ಆಂಟಿಫ್ರೀಝ್ ಮಿಶ್ರಣಗಳು ಎಲ್ಲವಕ್ಕೂ ಗ್ಲಿಸರೀನ್ ಬೇಕು.

ಕಣ್ಣೀರು ಹಾಗಿರಲಿ, ಸಹಜ ನೀರೂ ತೊಟ್ಟಿಕ್ಕದಂತೆ ರಿವಾಟರ್ ಪ್ರೂಫಿಂಗ್‌ರಿ ಅಂಟುಗಳ ತಯಾರಿಕೆಗೂ ಕಚ್ಚಾ ಟ್ಯಾಲೊ ಬಳಕೆಯಾಗುತ್ತದೆ. ಆಹಾರವಸ್ತುಗಳನ್ನು ಪ್ಯಾಕಿಂಗ್ ಮಾಡಲು ಬೇಕಾದ ವಿಶೇಷ ಬಗೆಯ ಎಣ್ಣೆಕಾಗದವೂ ಇದರಿಂದಲೇ ತಯಾರಾಗುತ್ತದೆ. ನಾನಾ ಬಗೆಯ ಆಂಟಿಬಯಾಟಿಕ್ ಔಷಧಗಳೂ ಕೂಡ. ಇನ್ನು ಮೂಳೆ, ಗೊರಸು ಮತ್ತು ಕೊಂಬುಗಳನ್ನು ಕಾಯಿಸಿದಾಗ ಭಕ್ಷ್ಯಯೋಗ್ಯ ಟ್ಯಾಲೊ ಎಣ್ಣೆ ದೊರಕುತ್ತದೆ. ಇದು ಚ್ಯೂಯಿಂಗ್ ಗಮ್, ಬೇಕರಿ ಖಾದ್ಯಗಳಲ್ಲಿ ಬಳಕೆಯಾಗುತ್ತದೆ.

ದನಗಳ ಅಂಗಾಂಶಗಳನ್ನು ಜೋಡಿಸುವ ಕೊಲಾಜೆನ್ ಎಂಬ ದ್ರವ್ಯಕ್ಕೆ ಭಾರೀ ಬೇಡಿಕೆ ಇದೆ. ಚರ್ಮವನ್ನು ಹಿಂಡಿದಾಗಲೂ ಕೊಲಾಜೆನ್ ಸಿಗುತ್ತದೆ. ಇದರ ವೈದ್ಯಕೀಯ ಉಪಯೋಗದ ಪಟ್ಟಿಯೇ ಸಾಕಷ್ಟು ದೀರ್ಘವಿದೆ. ಹಿರಿಯ ನಾಗರಿಕರಿಗೆ ಮೂತ್ರ ವಿಸರ್ಜನೆ ಅನಿಯಂತ್ರಿತವಾದಾಗ ಇದನ್ನೇ ಚುಚ್ಚುಮದ್ದಿನ ಔಷಧವಾಗಿ ಕೊಡುತ್ತಾರೆ. ಗಾಯಗಳಿಗೆ ಸುತ್ತಲೆಂದು ನಂಜುನಿರೋಧಕ ಬ್ಯಾಂಡೇಜ್‌ಗಳ ತಯಾರಿಕೆಗೆ ಇದೇ ಬೇಕು. ಗಾಯ ಒಣಗಿದ ನಂತರ ಆಳವಾದ ಗೀರು ಬಿದ್ದಿದ್ದರೆ, ಸುರೂಪ ಚಿಕಿತ್ಸಕರು ಅದನ್ನು ಮರೆಮಾಚಲೆಂದು ಕೊಲಾಜೆನ್ ತುಂಬುತ್ತಾರೆ. ಕಣ್ಣಿನ ಪೊರೆ ನಿವಾರಣೆಗೆ ಪಾಪೆ ಕವಚವಾಗಿ ಕೂಡ ಇದು ನೆರವಿಗೆ ಬರುತ್ತದೆ. ಇನ್ನು ಖಾದ್ಯ ಉದ್ಯಮದಲ್ಲಂತೂ ಇದೇ ಕೊಲಾಜೆನ್ ಪಾತ್ರವನ್ನು ಹೇಳುವುದೇ ಬೇಡ. ಜಿಲೆಟಿನ್ ಪುಡಿ ಇದರಿಂದಲೇ ತಯಾರಾಗುತ್ತದೆ. ಜೆಲ್ಲಿ, ಜಾಮ್‌ಗಳಿಗೆ ಇದಿಲ್ಲದಿದ್ದರೆ ಆಗುವುದಿಲ್ಲ.

ಬಹಳಷ್ಟು ಸೌಂದರ್ಯ ವರ್ಧಕ ದ್ರವ್ಯಗಳಲ್ಲಿ ಕೊಲಾಜೆನ್ ಕ್ರೀಮ್ ಇದ್ದೇ ಇರುತ್ತದೆ. ಜತೆಗೆ ತರಾವರಿ ಮುಲಾಮು, ನೋವು ನಿವಾರಕ ಎಣ್ಣೆಗೆಲ್ಲ ಇದೇ ಬೇಕು. ಫೊಟೊಗ್ರಫಿ, ಸಿನಿಮಾ ಫಿಲ್ಮ್ ತಯಾರಿಕೆಗೂ ಇದು ಕಚ್ಚಾವಸ್ತುವಾಗಿ ಬಳಕೆಯಾಗುತ್ತದೆ. ಸಿನೆಮಾ ನಟ ನಟಿಯರ ಮುಖದಲ್ಲಿ ಸುಕ್ಕುಗಳು ಕಾಣಿಸದಂತೆ ಬಳಸುವ ವೃದ್ಧಾಪ್ಯನಿರೋಧಕ ಕ್ರೀಮ್ ಕೂಡ ಇದರಿಂದಲೇ ತಯಾರಾಗುತವೆ.

ಮಲಿನ ಗಾಳಿಯನ್ನು ಸೋಸಲು ಇಂದು ಬಳಕೆಯಾಗುತ್ತಿರುವ ವಿಧವಿಧದ ಫಿಲ್ಟರ್‌ಗಳನ್ನು ದನಗಳ ಕೂದಲಿನಿಂದ ತಯಾರಿಸಲಾಗುತ್ತದೆ. ನೀವು ಕೂತಿದ್ದ ಕಾರಿನ ಕುಶನ್ ತುಂಬಾ ದುಬಾರಿಯದಾಗಿದ್ದರೆ, ಅದು ವಿಶೇಷವಾಗಿ ಸಂಸ್ಕರಿಸಿದ ದನದ ಚರ್ಮದ್ದೇ ಇದ್ದೀತು.

ಇದು ಸಂಕ್ಷಿಪ್ತ ಗೋಚರಿತ್ರೆ. ಇಷ್ಟೆಲ್ಲ ವಿಧಗಳಲ್ಲಿ ಕೈಗಾರಿಕೆಗಳಲ್ಲಿ ಬಳಕೆಯಾz ನಂತರವೂ ಇನ್ನಷ್ಟು ಗೋದ್ರವ್ಯಗಳು ಕಸಾಯಿಖಾನೆಗಳಲ್ಲಿ ಉಳಿದಿರುತ್ತವೆ. ಅವನ್ನೆಲ್ಲ ಬಾಚಿ ಒಣಗಿಸಿ ಪುಡಿ ಮಾಡಿ, ಪಶು ಆಹಾರವಾಗಿ ಗೋವುಗಳಿಗೆ ತಿನ್ನಿಸಿದ್ದರಿಂದಲೇ ಅವುಗಳ ಶರೀರದಲ್ಲಿ ಪ್ರಯಾನ್ ಎಂಬ ಪ್ರಳಯಕಾರಿ ಪ್ರೋಟೀನುಗಳು ಉತ್ಪಾದನೆಯಾಗಿ ಹುಚ್ಚುಹಸು ಕಾಯಿಲೆ ಬಂತೆಂದು
ಹೇಳಲಾಗುತ್ತದೆ. ಕಸಾಯಿಖಾನೆಯ ಉಳಿಕೆ ಕಚಡಾ ವಸ್ತುಗಳನ್ನು ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಇಂಧನವಾಗಿ ಉರಿಸುವ ಸಂಪ್ರದಾಯ ಆರಂಭವಾಗಿದೆ.

ಸರಿ, ವಿದ್ಯುತ್ ಉತ್ಪಾದನೆಯ ನಂತರವಾದರೂ ಕತೆ ಮುಗಿಯಿತೆ? ಇಲ್ಲ ನಿಲ್ಲಿ. ಉರಿಸಿದ ನಂತರ ಉಳಿಯುವ ಹಾರುಬೂದಿಯನ್ನು ಏನು ಮಾಡೋಣ? ಅದರಲ್ಲಿ ಕೆಲವು ಪಾಲು ಹೊಲ ಗದ್ದೆಗಳಿಗೆ ಹೋಗುತ್ತವೆ. ಇನ್ನು ಕೆಲವು ಪಾಲನ್ನು ಮನೆಕಟ್ಟುವ ಇಟ್ಟಿಗೆಯಾಗಿ ಪರಿವರ್ತಿಸಲಾಗುತ್ತದೆ. ಅಮೃತಶಿಲೆಯ ಮಹಲುಗಳಿಗೇನೂ ಇಂಥ ಇಟ್ಟಿಗೆಗಳು ಬಳಕೆಯಾಗಲಿಕ್ಕಿಲ್ಲ. ಆದರೆ ದನದ ಕೊಟ್ಟಿಗೆಗಳ ನಿರ್ಮಾಣಕ್ಕಂತೂ ಇವು ಧಾರಾಳ ನೆರವಿಗೆ ಬರುತ್ತವೆ. ರಿಇದು ಮುಗಿಯುವ ಕತೆಯೇ ಅಲ್ಲರಿ ಎನ್ನುತ್ತ ಪುಟ ಮಗುಚಿ ಎದ್ದು ಹೊರಟಿರಾ? ಹೊರಡುವ ಮುನ್ನ ಇಲ್ಲಿ ಮುದ್ರಿತವಾದ ಅಕ್ಷರಗಳತ್ತ ಒಮ್ಮೆ ಕಣ್ಣು ಹಾಯಿಸಿ. ಇದಕ್ಕೆ ಬಳಸಿದ ಇಂಕಿನಲ್ಲಿ ಕೂಡ ಗೋವಿನ ಅಂಶವಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕೆಂದಿದ್ದರೆ ನೋಡಿ:

http://www.rense.com/general6/cow.htm
- ನಾಗೇಶ ಹೆಗಡೆ

Monday, July 14, 2008

ಸರ್ವಧಾರಿ ಚಾತುರ್ಮಾಸ್ಯ

ಹರೇ ರಾಮ,

ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಸರ್ವಧಾರಿ ಚಾತುರ್ಮಾಸ್ಯ ದಿನಾಂಕ 18-07-09 ರಿಂದ 15-09-08 ರವರೆಗೆ ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯಲಿದೆ. ತಮಗೆಲ್ಲಾ ಆತ್ಮೀಯ ಸ್ವಾಗತWednesday, July 2, 2008

ಶ್ರೀಭಾರತೀ ಪ್ರಕಾಶನ

ಜೀವನವನ್ನು ಉಜ್ಜೀವನಗೊಳಿಸುವ ಪುಸ್ತಕಗಳ ಪ್ರಕಾಶನಕ್ಕಾಗಿ ಸ್ಥಾಪನೆಗೊಂಡ ಸಂಸ್ಥೆ ‘ಶ್ರೀಭಾರತೀ ಪ್ರಕಾಶನ’. ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಪ್ರಕಾಶನದ ಸ್ಥಾಪಕರು. ‘ಧರ್ಮಭಾರತೀ’ ಮತ್ತು ‘ಶ್ರೀಮುಖ’ ಎನ್ನುವ ಎರಡು ಪತ್ರಿಕೆಗಳನ್ನು ಪ್ರಕಾಶನ ಹೊರತರುತ್ತಿದೆ. ಸ್ಥಾಪನೆಯಾದ ಏಳು ವರ್ಷಗಳಲ್ಲಿ ೨೨ ಗ್ರಂಥಗಳನ್ನು ಹೊರತಂದಿದೆ. ಕಡಿಮೆ ವೆಚ್ಚದಲ್ಲಿ ಶ್ರೇಷ್ಠ ವಿಚಾರಗಳನ್ನು ಓದುಗರಿಗೆ ತಲುಪಿಸುವ ಕನಸು ಪ್ರಕಾಶನದ್ದು.

ಹೆಚ್ಚಿನ ವಿವರಗಳನ್ನು ಧರ್ಮಭಾರತೀ ಅಂತರಜಾಲ ತಾಣದಲ್ಲಿ ಪಡೆಯಬಹುದು
http://www.dharmabharathi.org/shribhararthi.html

ಧರ್ಮಭಾರತೀ

‘ಧರ್ಮಭಾರತೀ’ಶಾಶ್ವತಮೌಲ್ಯಗಳನ್ನು ಸಕಾಲಿಕವಾಗಿ ಸಾರುವ ಮಾಸಿಕ. ಸನಾತನಧರ್ಮದ ಲೋಕಹಿತಕರವಾದ ಮೌಲ್ಯಗಳನ್ನು ಬಿತ್ತರಿಸುವ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂಕಲ್ಪವೇ ಪತ್ರಿಕೆಯ ಹುಟ್ಟಿಗೆ ಕಾರಣ. ಏಳು ವರ್ಷಗಳ ಈ ಪಯಣದಲ್ಲಿ ಅಸಂಖ್ಯ ವಿಷಯಗಳನ್ನು ಪತ್ರಿಕೆ ಸ್ಪರ್ಶಿಸಿದೆ. ಸನಾತನಧರ್ಮ ಬಗೆದಷ್ಟೂ ಬರಿದಾಗದ ಅನರ್ಘ್ಯ ಗಣಿ. ಆದರೂ ಈ ಗಣಿಯ ಉದ್ದಗಲಗಳ ಹೊರನೋಟ ಪತ್ರಿಕೆಯಿಂದ ಸಾಧ್ಯವಾಗಿದೆ

ಸನಾತನ ಮಹರ್ಷಿಗಳು ತಮ್ಮ ತಪೋಭೂಮಿಯಲ್ಲಿ ಅರಳಿದ ದಿವ್ಯ ಮೌಲ್ಯಗಳ ಸದಾ ಬಾಡದ ಪುಷ್ಪಗಳನ್ನು ಈ ಭರತಭೂಮಿಯಲ್ಲಿ ಅರಳಿಸಿದ್ದಾರೆ. ಅದರ ದಿವ್ಯ ಗಂಧವನ್ನು, ಭಾರತೀಯತೆಯನ್ನು ಈ ಕಾಲಘಟ್ಟದಲ್ಲಿ ಉಳಿಸಿ-ಬೆಳೆಸಲು ಪತ್ರಿಕೆ ಬದ್ಧವಾಗಿದೆ. ಸದಾಚಾರಸಂಪನ್ನತೆಯನ್ನು, ಭಾರತೀಯವಾದ ವಿದ್ಯೆ-ಕಲೆಗಳ ವೈಭವವನ್ನು ಜನಮಾನಸಕ್ಕೆ ತಲುಪಿಸಿ ಅದರ ಸಂರಕ್ಷಣೆ-ಸಂವರ್ಧನೆಗೆ ಪತ್ರಿಕೆ ತನ್ನದೇ ಆದ ವಿಶಿಷ್ಟ ಸೇವೆಯೊಂದಿಗೆ ಮುಂದೆ ಸಾಗುತ್ತಿದೆ. ಆಬಾಲವೃದ್ಧರ ಮನ-ಮನೆಯೊಪ್ಪುವ ಭಾರತೀಯ ಚಿಂತನೆಗಳನ್ನು ಪ್ರಕಟಿಸಿ ಸಂಸ್ಕೃತಿಸೇವೆ ಸಲ್ಲಿಸುವುದು ಪತ್ರಿಕೆಯ ಪರಮೋದ್ದೇಶ.

ಹೆಚ್ಚಿನ ವಿವರಗಳನ್ನು ಧರ್ಮಭಾರತೀ ಅಂತರಜಾಲ ತಾಣದಲ್ಲಿ ಪಡೆಯಬಹುದು. http://www.dharmabharathi.org

ಪ್ರತಿವರ್ಷ ನಡೆಯುವ ಉತ್ಸವಗಳು

ಶ್ರೀಮಠವು ಪ್ರತಿವರ್ಷವೂ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾಲಾವೈಭವಗಳನ್ನೊಳಗೊಂಡ ರಾಮೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ.

ಚಾತುರ್ಮಾಸ್ಯ ವ್ರತ: ಈ ಅವಧಿಯಲ್ಲಿ ಶಾಸ್ತ್ರ ಸಮೀಕ್ಷೆ, ವೇದ ಸಮ್ಮೇಳನ, ಕೃಷಿ, ಚಿತ್ರಕಲೆ ಇತ್ಯಾದಿ ಶೈಕ್ಷಣಿಕ ಕಾರ್ಯಕ್ರಮಗಳು ಜರುಗುವವು. ಗುರುಶಿಷ್ಯ ಸಮಾಗಮವಾಗುವ ಈ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುವವು.

ರಾಷ್ಟ್ರ ಹಾಗು ರಾಜ್ಯಮಟ್ಟದ ಸಾಮವೇದ, ಆಯುರ್ವೇದ, ಯಕ್ಷಗಾನ, ಕೃಷಿ ಮೊದಲಾದ ಸಮ್ಮೇಳನಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಗುರುತಿಸಲು ಚಿತ್ರಕಲೆ, ಸಂಗೀತ, ಭಾಷಣ, ಭಗವದ್ಗೀತೆ ಮತ್ತು ಕ್ರೀಡಾಸ್ಪರ್ಧೆಗಳನ್ನು ಸಂಘಟಿಸಿ ಪುರಸ್ಕರಿಲಾಗುತ್ತಿದೆ

ಪ್ರಶಸ್ತಿಗಳು

ಶ್ರೀಮಠವು ಪ್ರತಿ ವರ್ಷವೂ ಮೂರು ಪ್ರಶಸ್ತಿಗಳನ್ನು ನೀಡಿ ಅನುಗ್ರಹಿಸುತ್ತಿದೆ.

ಶ್ರೀರಾಮಾನುಗ್ರಹ ಪ್ರಶಸ್ತಿ: ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ಸಮ್ಮಾನ.
ಚಾತುರ್ಮಾಸ್ಯ ಪ್ರಶಸ್ತಿ: ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಪುರಸ್ಕಾರ.
ಶ್ರೀಮಾತಾ ಪ್ರಶಸ್ತಿ: ಸಮಾಜ ಸೇವೆಗಾಗಿ ಜೀವನವನ್ನು ಮುಡಿಪಾಗಿರಿಸಿದ ಮಹಿಳೆಯರನ್ನು ಗುರುತಿಸಿ ಗೌರವಿಸುವುದು.

ದೇವಸ್ಥಾನಗಳು

 • ಶ್ರೀ ಬಟ್ಟೆ ವಿನಾಯಕ ದೇವಾಲಯ, ಕೆಕ್ಕಾರು, ಹೊನ್ನಾವರ ತಾಲ್ಲೂಕು
 • ಶ್ರೀ ಸ್ವಯಂಭು ದೇವಾಲಯ, ಕಡತೋಕ, ಹೊನ್ನಾವರ ತಾಲ್ಲೂಕು
 • ಶ್ರೀರಾಮ ದೇವಾಲಯ, ಚೊಕ್ಕಾಡಿ, ಸುಳ್ಯ ತಾಲ್ಲೂಕು
 • ಶ್ರೀಉಮಾಮಹೇಶ್ವರಿ ದೇವಸ್ಥಾನ, ಹೊಸಗುಂದ, ಸಾಗರ ತಾಲ್ಲೂಕು

ಆಸ್ಪತ್ರೆಗಳು ಮತ್ತು ವೈದ್ಯಕೀಯ ಕೇಂದ್ರಗಳು

 1. ಶ್ರೀಭಾರತೀ ನೇತ್ರ ಚಿಕಿತ್ಸಾಲಯ, ಮುಜಂಗಾವು, ಕಾಸರಗೋಡು ಜಿಲ್ಲೆ,
 2. ಶ್ರೀಭಾರತೀ ಸ್ವಾಸ್ಥ್ಯ ಮಂದಿರ, ಮುಜಂಗಾವು, ಕಾಸರಗೋಡು ಜಿಲ್ಲೆ.
 3. ಪುಣ್ಯಕೋಟಿ ಕ್ಯಾನ್ಸರ್ ಅವೇರ್ನೆಸ್, ಕೇರ್ ಮತ್ತು ರಿಸೆರ್ಚ್ ಸೆಂಟರ್, ಮುಳ್ಳೇರಿಯ, ಕಾಸರಗೋಡು
 4. ಶ್ರೀಭಾರತೀ ಆರೋಗ್ಯಧಾಮ, ಆರ್.ಪಿ.ಸಿ. ಲೇಔಟ್, ವಿಜಯನಗರ, ಬೆಂಗಳೂರು
 5. ಶ್ರೀಭಾರತೀ ಗವ್ಯ ಚಿಕಿತ್ಸಾಲಯ, ಹೊಸನಗರ
 6. ಅಮೃತಭಾರತೀ ಗವ್ಯ ಚಿಕಿತ್ಸಾಲಯ, ಮುಳಿಯ
 7. ಅಮೃತಭಾರತೀ ಮೆಡಿಕಲ್ ಸೆಂಟರ್, ಮಂಚಿ, ಬಂಟ್ವಾಳ ತಾಲ್ಲೂಕು
 8. ಶ್ರೀಭಾರತೀ ಮೊಬೈಲ್ ಹಾಸ್ಪಿಟಲ್, ಸಾಗರ, ಶಿವಮೊಗ್ಗ ಜಿಲ್ಲೆ
 9. ಅಮೃತಭಾರತೀ ಚಿಕಿತ್ಸಾಲಯ (ಗವ್ಯ ಚಿಕಿತ್ಸಾ ಕೇಂದ್ರ), ಶ್ರೀರಾಮಾಶ್ರಮ, ಗಿರಿನಗರ, ಬೆಂಗಳೂರು

Monday, June 30, 2008

ವಿದ್ಯಾಸಂಸ್ಥೆಗಳು / ವಿದ್ಯಾಲಯಗಳು

 1. ಶ್ರೀ ಭಾರತೀ ಕಾಲೇಜು, ನಂತೂರು, ಮಂಗಳೂರು
 2. ಶ್ರೀ ಸೀತಾರಾಘವ ಪ್ರಿ-ಯೂನಿವರ್ಸಿಟಿ ಕಾಲೇಜು, ಪೆರ್ನಾಜೆ, ದ.ಕ
 3. ಶ್ರೀ ಭಾರತೀ ಗುರುಕುಲ, ಹೊಸನಗರ
 4. ಶ್ರೀ ಮಾತಾ ಗುರುಕುಲ, ಹೊಸನಗರ
 5. ಶ್ರೀ ರಾಘವೇಂದ್ರಭಾರತೀ ಸವೇದ ಸಂಸ್ಕೃತ ಮಹಾವಿಧ್ಯಾಲಯ, ಕವಲಕ್ಕಿ, ಹೊನ್ನಾವರ ತಾಲ್ಲೂಕು
 6. ಶ್ರೀಭಾರತೀ ಸಂಸ್ಕೃತ ಮಹಾವಿಧ್ಯಾಲಯ, ಮುಜುಂಗಾವು, ಕಾಸರಗೋಡು
 7. ಶ್ರೀರಾಮ ಸಂಸ್ಕೃತ ವೇದಪಾಠಶಾಲಾ, ಪೆರಾಜೆ, ಬಂಟ್ವಾಳ ತಾಲ್ಲೂಕು
 8. ಶ್ರೀರಾಘವೇಂದ್ರ ಭಾರತೀ ವೇದಪಾಠಶಾಲಾ, ಗೋಕರ್ಣ
 9. ಶ್ರೀವಿದ್ಯಾರಣ್ಯ ಸಂಸ್ಕೃತ ಪಾಠಶಾಲಾ, ಕೆಕ್ಕಾರು, ಹೊನ್ನಾವರ ತಾಲ್ಲೂಕು
 10. ಶ್ರೀಭಾರತೀ ವಿದ್ಯಾನಿಕೇತನ, ಚದರವಳ್ಳಿ, ಸಾಗರ ತಾಲ್ಲೂಕು
 11. ಶ್ರೀಭಾರತೀ ವಿದ್ಯಾಪೀಠ ಹೈಸ್ಕೂಲ್, ಬದಿಯಡ್ಕ, ಕಾಸರಗೋಡು
 12. ಶ್ರೀಪ್ರಗತಿ ವಿದ್ಯಾಲಯ, ಮೂರೂರು, ಕುಮುಟ ತಾಲ್ಲೂಕು
 13. ಶ್ರೀಸಾಯಿ ಸರಸ್ವತಿ ವಿದ್ಯಾಕೇಂದ್ರ, ಬೋಗಾದಿ, ಮೈಸೂರು
 14. ಶ್ರೀಸೀತಾರಾಘವ ಹೈಸ್ಕೂಲ್, ಪೆರ್ನಾಜೆ
 15. ಶ್ರೀಭಾರತೀ ವಿದ್ಯಾನಿಕೇತನ ಹೈಸ್ಕೂಲ್, ನರಿಕೊಂಬು, ಪುತ್ತೂರು ತಾಲ್ಲೂಕು
 16. ಶ್ರೀ ಮುಳಿಯ ತಿಮ್ಮಪ್ಪಯ್ಯ ಮೆಮೋರಿಯಲ್ ಸ್ಕೂಲ್, ಮುಳಿಯ
 17. ಶ್ರೀರಾಘವೇಶ್ವರ ಭಾರತೀ ಹೈಸ್ಕೂಲ್, ಇರ್ದೆ. ಪುತ್ತೂರು ತಾಲ್ಲೂಕು
 18. ಶ್ರೀಭಾರತೀ ವಿದ್ಯಾಪೀಠ, ಬದಿಯಡ್ಕ, ಕಾಸರಗೋಡು ಜಿಲ್ಲೆ
 19. ಶ್ರೀ ಸೀತಾರಾಘವ ಪ್ರೈಮರಿ ಸ್ಕೂಲ್, ಪೆರ್ನಾಜೆ
 20. ಶ್ರೀಭಾರತೀ ಮಂದಿರ, ಇರ್ದೆ. ಪುತ್ತೂರು ತಾಲ್ಲೂಕು
 21. ಶ್ರೀ ಸ್ವಾಮಿ ಸದಾನಂದ ಸರಸ್ವತಿ ವಿದ್ಯಾಲಯ, ಮಂಗಳೂರು
 22. ಹೈಯರ್ ಸೆಕೆಂಡರಿ ಸ್ಕೂಲ್, ಉರುವಾಲು, ಬೆಳ್ತಂಗಡಿ ತಾಲ್ಲೂಕು
 23. ಶ್ರೀಭಾರತೀ ನರ್ಸರಿ ಮತ್ತು ಪ್ರೈಮರಿ ಸ್ಕೂಲ್, ಮುಜಂಗಾವು, ಕಾಸರಗೋಡು ಜಿಲ್ಲೆ
 24. ಹೈಯರ್ ಸೆಕೆಂಡರಿ ಸ್ಕೂಲ್, ಕೆದಿಲ, ಪುತ್ತೂರು ತಾಲ್ಲೂಕು
 25. ಶಾರದ ಹೈಯರ್ ಸೆಕೆಂಡರಿ ಸ್ಕೂಲ್, ಬೊಳ್ಳಾಜೆ, ಸುಳ್ಯ ತಾಲ್ಲೂಕು

ಶ್ರೀರಾಮಚಂದ್ರಾಪುರಮಠ ಮತ್ತು ಶಾಖಾಮಠಗಳು

1. ಶ್ರೀರಾಮಚಂದ್ರಾಪುರಮಠ, ಹೊಸನಗರ, ಶಿವಮೊಗ್ಗ ಜಿಲ್ಲೆ
2. ಶ್ರೀಮದಾಧ್ಯ ಶ್ರೀರಘೋತ್ತಮಮಠ, ಗೋಕರ್ಣ
3. ಶ್ರೀರಘೋತ್ತಮಮಠ, ಕೆಕ್ಕಾರು, ಹೊನ್ನಾವರ ತಾಲ್ಲೂಕು
4. ಶ್ರೀರಾಮಚಂದ್ರಾಪುರಮಠ ತೀರ್ಥಹಳ್ಳಿ
5. ಅಪ್ಸರಕೊಂಡಮಠ ಕಾಸರಗೋಡು, ಹೊನ್ನಾವರ ತಾಲ್ಲೂಕು
6. ಶ್ರೀರಾಮದೇವಮಠ ಭಾನ್ಕುಳಿ, ಸಿದ್ದಾಪುರ ತಾಲ್ಲೂಕು
7. ಶ್ರೀರಾಮಚಂದ್ರಾಪುರಮಠ, ಪೆರಾಜೆ, ಬಂಟ್ವಾಳ ತಾಲ್ಲೂಕು, ದ.ಕ
8. ಶ್ರೀರಾಮಾಶ್ರಮ, ಗಿರಿನಗರ, ಬೆಂಗಳೂರು
9. ಶ್ರೀರಾಮಾಶ್ರಮ, ಚದರವಳ್ಳಿ, ಸಾಗರ ತಾಲ್ಲೂಕು
10. ಶ್ರೀರಾಮಕೃಷ್ಣ ಕಾಳಿಕಾ ಮಠ, ಅಂಬಾಗಿರಿ, ಶಿರಸಿ

ಶ್ರೀರಾಘವೇಶ್ವರಭಾರತೀ ಸ್ವಾಮಿಗಳು

ಅವಿಚ್ಛಿನ್ನ ಪರಂಪರೆಯ ಶ್ರೀ ಮಹಾಸಂಸ್ಥಾನದ ಈಗಿನ ಪೀಠಾಧಿಪತಿಗಳಾಗಿರುವ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು – ಪರಮಪೂಜ್ಯರೂ, ಮಹಾನ್ ತಪಸ್ವಿಗಳೂ, ಶ್ರೇಷ್ಠ ವಿದ್ವಾಂಸರೂ ಆಗಿದ್ದ ಬ್ರಹ್ಮಲೀನ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರಿಂದ 1994 ಏಪ್ರಿಲ್ ನಲ್ಲಿ ಸಂನ್ಯಾಸಧೀಕ್ಷೆ ಪಡೆದರು.1999 ಏಪ್ರಿಲ್ ನಲ್ಲಿ ಪೀಠಾರೋಹಣ ಮಾಡಿದಂದಿನಿಂದ ಜೀವ ಜಗತ್ತಿನ ಶಾಂತಿ ಸಮೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಆಧ್ಯಾತ್ಮದ ಬಲದಿಂದ ಜನಸಮುದಾಯವನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತಿರುವ ಜೀವ ಕಾರುಣ್ಯದ ನೆಲೆಯಾಗಿರುವ ಶ್ರೀ ಶ್ರೀಗಳವರು ಈ ಜಗತ್ತು ಅವಿರತವಾಗಿ ಅನಂತಕಾಲದವರೆಗೂ ಪರಮಾನಂದದಲ್ಲಿ ನಿರತವಾಗಲೆನ್ನುವ ಸಂಕಲ್ಪದಿಂದ ಕಾರ್ಯನಿರತರಾಗಿದ್ದಾರೆ.

ಪರಮಪೂಜ್ಯರ ಧೀಶಕ್ತಿ, ಪ್ರಜ್ಞಾವಂತಿಕೆ, ತಪೊಬಲ, ಜೀವದಯೆ ಅವರನ್ನು ಈ ಜಗತ್ತಿನ ಶ್ರೇಷ್ಟ ಅಧ್ಯಾತ್ಮನಾಯಕರನ್ನಾಗಿಸಿವೆ.

Wednesday, June 25, 2008

ಶ್ರೀಮಠದ ಅಂತರಜಾಲ ತಾಣಗಳು

www.srimath.orgwww.dharmabharathi.orgwww.vishwagou.org


www.bharathividyalaya.in

ಶ್ರೀರಾಮಚಂದ್ರಾಪುರಮಠ

ಶ್ರೀರಾಮಚಂದ್ರಾಪುರಮಠ - ಶ್ರೇಷ್ಟ ಪರಂಪರೆಯ ಸುಧೀರ್ಘ ಪಥದಲ್ಲಿ
ಸನಾತನ ಧರ್ಮ ಪ್ರಸಾರಕ್ಕಾಗಿ ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠಗಳಲ್ಲಿ ಅವಿಚ್ಛಿನ್ನ ಪರಂಪರೆಯ ಶ್ರೀರಾಮಚಂದ್ರಾಪುರ ಮಠವು ವಿಶಿಷ್ಟ ಸ್ಥಾನವನ್ನು ಹೊಂದಿದೆ.

ಶ್ರೀ ರಾಮಚಂದ್ರಾಪುರಮಠವು ೧೨೦೦ ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಗೋಕರ್ಣದ ಅಶೋಕದಲ್ಲಿ ಶ್ರೀ ಶಂಕರಭಗವತ್ಪಾದರಿಂದ ಸ್ಥಾಪಿತಗೊಂಡಿತು. ಭಗವತ್ಪಾದರಿಂದ ಶ್ರೀ ಪೀಠದ ಪ್ರಥಮ ಪೀಠಾಧಿಪತಿಗಳಾಗಿ ನಿಯುಕ್ತಿಗೊಂಡವರು ಶ್ರೀ ವಿದ್ಯಾನಂದಾಚಾರ್ಯರು.

ಶ್ರೀ ಶಂಕರಭಗವತ್ಪಾದರಿಗೆ ಅಗಸ್ತ್ಯ ಶಿಷ್ಯರಾದ ವರದ ಮುನಿಗಳು ತಾವು ಪೂಜಿಸುತ್ತಿದ್ದ ಶ್ರೀರಾಮ –ಸೀತಾ ಲಕ್ಷ್ಮಣ ಮೂರ್ತಿಗಳನ್ನು ನೀಡಿದರು. ಭಗವತ್ಪಾದರು ಅವುಗಳೊಂದಿಗೆ ಶ್ರೀ ರಾಜರಾಜೇಶ್ವರೀ ಮತ್ತು ಶ್ರೀ ಚಂದ್ರಮೌಳೀಶ್ವರ ಲಿಂಗಗಳನ್ನು ಸೇರಿಸಿ ವಿದ್ಯಾನಂದಾಚಾರ್ಯರಿಗೆ ಅನುಗ್ರಹಿಸಿದರು. ಆ ದೇವತಾ ಮೂರ್ತಿಗಳು ಅಂದಿನಿಂದ ಇಂದಿನವರೆಗೂ ಅನುದಿನವೂ ಶ್ರೀ ಮಠದಲ್ಲಿ ಶ್ರೀಗಳವರಿಂದ ಪೂಜೆಗೊಳ್ಳುತ್ತಿವೆ.

ಶ್ರೀ ಮಠಕ್ಕೆ ಪರಂಪರಾಗತವಾದ ವಿಶಾಲವ್ಯಾಪ್ತಿಯ ಶಿಷ್ಯ ಸಮೂಹವಿದೆ. ಜಾತಿ- ವರ್ಗಭೇದವಿಲ್ಲದೆ ದೇಶ-ವಿದೇಶಗಳ ಭಕ್ತಾಭಿಮಾನಿಗಳು ಶ್ರೀಗಳವರ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ಪ್ರಕೃತ ಶ್ರೀ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರು ಸನಾತನಧರ್ಮದ ಪುನರುಜ್ಜೀವನಕ್ಕಾಗಿ ಹಾಗೂ ಜನ ಸಮೂಹದ ಜೀವನೋತ್ಕರ್ಷಕ್ಕಾಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕ್ರ್ರತಿಕ ಯೋಜನೆಗಳನ್ನು ರೂಪಿಸಿದ್ದಾರೆ.