Tuesday, October 14, 2008

ಗುರುಭಾರತೀ - ಕರ್ಮದ ಬಳ್ಳಿ ತುಂಡಾದಾಗ......

ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್
ಶ್ರೀಸಂಸ್ಥಾನಗೋಕರ್ಣ-ಶ್ರೀರಾಮಚಂದ್ರಾಪುರಮಠ
ಶ್ರೀಮತ್ಪರಮಹಂಸೇತ್ಯಾದಿಬಿರುದಾಲಂಕೃತ
ಶ್ರೀಗೋಕರ್ಣಮಂಡಲಾಧೀಶ್ವರ
ಶ್ರೀಮದ್ರಾಘವೇಂದ್ರಭಾರತೀಗುರುಕರಕಮಲಸಂಜಾತ
ಶ್ರೀಮಜ್ಜಗದ್ಗುರುಶಂಕರಾಚಾರ್ಯ

ಶ್ರೀಮದ್ರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂದೇಶ
ಗುರುಭಾರತೀ

ಕರ್ಮದ ಬಳ್ಳಿ ತುಂಡಾದಾಗ......

ಶ್ರೀದತ್ತಾತ್ರೇಯರ ಅವತಾರವೆಂದೇ ಪ್ರಸಿದ್ಧರಾದ ಶ್ರೀನೃಸಿಂಹಸರಸ್ವತೀಮಹಾಸ್ವಾಮಿಗಳು ಪಂಚಗಂಗಾ ಸಂಗಮದ ನರಸೋಬವಾಡಿಯಲ್ಲಿ ನೆಲೆಸಿದ್ದ ಕಾಲವದು. ಗ್ರಾಮದಲ್ಲಿ ಅತ್ಯಂತ ದರಿದ್ರನಾದ ಆದರೆ ಸುಶೀಲನಾದ ಬ್ರಾಹ್ಮಣನೊಬ್ಬನಿದ್ದನು. ಜೀವನೋಪಾಯಕ್ಕಾಗಿ ಅಲ್ಲಿ ಇಲ್ಲಿ ಭಿಕ್ಷೆ ಬೇಡುತ್ತಿದ್ದ ಆತನ ಮನೆಯ ಮುಂದೆ ಅವರೆಯ ಬಳ್ಳಿಯೊಂದು ಸಮೃದ್ಧವಾಗಿ ಬೆಳೆದಿತ್ತು. ಅದರಲ್ಲಿ ಅತಿಶಯವಾಗಿ ಆಗುತ್ತಿದ್ದ ಅವರೆಕಾಯಿಗಳಿಂದ ಅವನ ಉದರಭರಣವಾಗುತ್ತಿತ್ತು. ಶ್ರೀಗುರುಗಳ ಪರಮ ಭಕ್ತನಾಗಿದ್ದ ಆತ ಒಮ್ಮೆ ಗುರುಗಳನ್ನು ಮನೆಗೆ ಕರೆದುಕೊಂಡು ಹೋಗಿ ಅತ್ಯಂತ ಶ್ರದ್ಧೆಯಿಂದ ಪೂಜಿಸಿದ. ಗುರುಗಳು ಬ್ರಾಹ್ಮಣನನ್ನು ಹತ್ತಿರ ಕರೆದು “ಇಂದಿಗೆ ನಿನ್ನ ದಾರಿದ್ರ್ಯವು ತೊಲಗಿತು, ಅಖಂಡೈಶ್ವರ್ಯವು ನಿನ್ನಲ್ಲಿ ಇನ್ನು ಮೇಲೆ ಸ್ಥಿರವಾಗಿರುವುದು” ಎಂದು ವರವನ್ನಿತ್ತು ಹೊರಟರು. ಹೊರಗೆ ಹೋಗುವಾಗ ಅಂಗಳದಲ್ಲಿ ಬೆಳೆದಿದ್ದ ಅವರೆಯ ಬಳ್ಳಿಯನ್ನು ಬೇರಿನವರೆಗೆ ಕತ್ತರಿಸಿ ಹಾಕಿ ಹೊರಟು ಹೋದರು. ಬ್ರಾಹ್ಮಣ ಕುಟುಂಬಕ್ಕೆ ಆಘಾತವಾಯಿತು. ಜೀವನಕ್ಕೆ ಏಕೈಕ ಆಧಾರವಾಗಿದ್ದ ಅವರೆಯ ಬಳ್ಳಿಯ ನಾಶಕ್ಕಾಗಿ ಬ್ರಾಹ್ಮಣ ಪತ್ನಿಯು ಶೋಕಿಸತೊಡಗಿದಳು. ಕತ್ತರಿಸಿ ಚೆಲ್ಲಿದ ಅವರೆಬಳ್ಳಿಯನ್ನು ತೆಗೆದು ನದಿಗೆಸೆದ ಬ್ರಾಹ್ಮಣ “ಬಳ್ಳಿಯೇ ಹೋದಮೇಲೆ ಅದರ ಬೇರು ನಮ್ಮ ಮನೆಯ ಮುಂದೆ ಏಕಿರಬೇಕು?” ಎಂಬ ಭಾವನೆಯಿಂದ ಅದರ ಬೇರು ಅಗೆದು ತೆಗೆಯತೊಡಗಿದನು. ಆಗ ಬೇರುಗಳ ಅಡಿಯಲ್ಲಿ ಹೊನ್ನಿನ ಕುಂಭವೊಂದು ಕಾಣಸಿಕ್ಕಿತು. ಬ್ರಾಹ್ಮಣನ ಸಮಸ್ತ ದಾರಿದ್ರ್ಯವೂ ಪರಿಹಾರವಾಗಿ ಅμಶ್ವರ್ಯಪ್ರಾಪ್ತಿಯಾಗಿತ್ತು.

ಈ ಕಥೆಯಲ್ಲಿ ಬರುವ ಬ್ರಾಹ್ಮಣ ಮನೆಯಂಗಳದಲ್ಲಿ ಅವರೆ ಬಳ್ಳಿಯನ್ನು ನೆಟ್ಟುಕೊಂಡು ನಿತ್ಯವೂ ಅದರ ಫಲವನ್ನು ತಿನ್ನುವಂತೆ ನಮ್ಮ ಮನೆಯಂಗಳದಲ್ಲಿ ಬಹುಕಾಲದಿಂದ ರೂಢಮೂಲವಾದ ಪೂರ್ವಕರ್ಮದ ಬಳ್ಳಿಯಲ್ಲಿ ಬಿಡುವ ದುಃಖ-ದಾರಿದ್ರ್ಯಗಳ ಫಲವನ್ನು ಅನುದಿನವೂ ತಿನ್ನುತ್ತಿದ್ದೇವೆ. ಪರಮಕೃಪಾಕರನಾದ ಗುರು ಕೃಪೆದೋರಿ ಆ ಕರ್ಮದ ಬಳ್ಳಿಯನ್ನು ಕತ್ತರಿಸಿದಾಗ ಪ್ರಕೃತಿಗರ್ಭದಲ್ಲಿ ಮುಚ್ಚಿಹೋಗಿರುವ ಆತ್ಮಾನಂದದ ನಿಧಿ ನಮಗೆ ದೊರೆಯುತ್ತದೆ. ಒಮ್ಮೆ ಆ ನಿಧಿ ದೊರೆತವನು ಮತ್ತೆ ಎಂದೆಂದಿಗೂ ಬಡವನಾಗಲಾರ.
ಕೃಪೆಃ ಧರ್ಮಭಾರತೀ ಮಾಸಪತ್ರಿಕೆ - ಆಗಸ್ಟ್

No comments: