Sunday, September 28, 2008

ಗುರುಭಾರತೀ - ಮಗು ಯಾರದು?

ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್
ಶ್ರೀಸಂಸ್ಥಾನಗೋಕರ್ಣ-ಶ್ರೀರಾಮಚಂದ್ರಾಪುರಮಠ
ಶ್ರೀಮತ್ಪರಮಹಂಸೇತ್ಯಾದಿಬಿರುದಾಲಂಕೃತ
ಶ್ರೀಗೋಕರ್ಣಮಂಡಲಾಧೀಶ್ವರ
ಶ್ರೀಮದ್ರಾಘವೇಂದ್ರಭಾರತೀಗುರುಕರಕಮಲಸಂಜಾತ
ಶ್ರೀಮಜ್ಜಗದ್ಗುರುಶಂಕರಾಚಾರ್ಯ

ಶ್ರೀಮದ್ರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂದೇಶ
ಗುರುಭಾರತೀ

ಮಗು ಯಾರದು?

ವಿವಾದಗಳನ್ನು ಸತ್ಯಸಮ್ಮತವಾಗಿ ನ್ಯಾಯನಿಷ್ಠುರವಾಗಿ ನಿರ್ಣಯಿಸುವುದರಲ್ಲಿ ಲೋಕ ಪ್ರಸಿದ್ಧನಾದ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಪ್ರಜೆಗಳ ಯೋಗಕ್ಷೇಮಗಳನ್ನು ವಿಚಾರಿಸುತ್ತಿರುವಾಗ ಸ್ತ್ರೀಯರ ನಡುವಿನ ವಿವಾದವೊಂದು ನ್ಯಾಯನಿರ್ಣಯಕ್ಕಾಗಿ ರಾಜನ ಮುಂದೆ ಬಂದಿತು. ಇಬ್ಬರು ಸ್ತ್ರೀಯರು ಮುದ್ದಾದ ಮಗುವೊಂದನ್ನು“ ತನ್ನ ಮಗು- ತನ್ನ ಮಗು” ಎಂದು ವಾದಿಸುತ್ತಿದ್ದರು. ರಾಜ ಇಬ್ಬರ ಅಹವಾಲುಗಳನ್ನೂ ಸಾವಧಾನವಾಗಿ ಆಲಿಸಿದ. ಇಬ್ಬರ ವಾದಕ್ಕೂ ಸಾಕಷ್ಟು ಪುಷ್ಟಿಯೇ ಇದ್ದ ಕಾರಣ ಮಗು ಯಾರದೆಂದು ಗುರುತಿಸಲು ಸಾಧ್ಯವಾಗಲಿಲ್ಲ. ವಿಕ್ರಮಾದಿತ್ಯ ಬಹುವಿಧವಾದ ಪರೀಕ್ಷೆಗಳನ್ನೇರ್ಪಡಿಸಿದ. ಇದ್ಯಾವುದೂ ಫಲಕಾರಿಯಾಗದಿದ್ದಾಗ ಭಟರನ್ನು ಕರೆದು ಮಗುವನ್ನು ಖಡ್ಗದಿಂದ ಇಬ್ಭಾಗ ಮಾಡಿ ಇಬ್ಬರು ತಾಯಿಯರಿಗೂ ಹಂಚಲು ಆದೇಶಿಸಿದ. ಮಗುವನ್ನು ಕತ್ತರಿಸಲು ಭಟರುಗಳು ಖಡ್ಗದೊಡನೆ ಮುಂದೆ ಬಂದರು. ಈರ್ವರು ಮಹಿಳೆಯರಲ್ಲಿ ಒಬ್ಬಳ ಮುಖ ಕಳೆಗುಂದಿತು. ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯತೊಡಗಿತು. ರಾಜನಲ್ಲಿ ಆಕೆ ಸೆರಗೊಡ್ಡಿ ಬೇಡಿದಳು- “ಮಹಾಪ್ರಭೂ! ದಯಮಾಡಿ ಮಗವನ್ನು ಕೊಲ್ಲಬೇಡಿ. ಆಕೆಗೇ ಮಗುವನ್ನು ಕೊಡಿ. ತಪ್ಪಿತಸ್ಥೆಯೆಂದು ನನ್ನನ್ನು ಶಿಕ್ಷಿಸಿದರೂ ಚಿಂತೆಯಿಲ್ಲ. ಎಲ್ಲಿಯಾದರೂ- ಹೇಗಾದರೂ ಮಗು ಬದುಕಿಕೊಂಡಿರಲಿ.” ತಕ್ಷಣವೇ ಮಹಾರಾಜ ಮಗುವನ್ನು ಆಕೆಗೇ ಕೊಡಲು ಅಪ್ಪಣೆ ಮಾಡಿದ. ಮಗುವನ್ನು ಕತ್ತರಿಸ ಹೊರಟರೂ ವಿಚಲಿತಳಾಗದ ಮತ್ತೊಬ್ಬಾಕೆಯನ್ನು ಸೆರೆಗೆ ತಳ್ಳಿದ.

ಆದಿಗುರು ಶಂಕರಾಚಾರ್ಯರು ಒಂದೆಡೆ ಹೇಳುತ್ತಾರೆ - ‘ಕೆಟ್ಟ ಮಕ್ಕಳಿರಬಹುದು, ಎಲ್ಲಿಯೂ ಕೆಟ್ಟ ತಾಯಿ ಇರಳು.“ ತಾಯಿ ಹೃದಯನಿಸ್ಸ್ವಾರ್ಥವಾದುದು. ವಾತ್ಸಲ್ಯಮಯವಾದುದು. ಈ ಕಥೆಯಲ್ಲಿ ಬರುವ ನಿಜವಾದ ತಾಯಿ ತನ್ನ ಮಗುವಿನ ಉಳಿವಿಗಾಗಿ ಅದನ್ನು ಬಿಟ್ಟುಕೊಟ್ಟು ತಾನು ಶಿಕ್ಷೆ ಅನುಭವಿಸಲೂ ಸಿದ್ಧಳಾದಳು. ನಿಸ್ಸ್ವಾರ್ಥವಾಗಿ ಮಕ್ಕಳ ಏಳಿಗೆಯನ್ನು ಬಯಸುವವಳೇ ನಿಜವಾದ ತಾಯಿ.

ಕೃಪೆಃ ಧರ್ಮಭಾರತೀ ಮಾಸಪತ್ರಿಕೆ - ಏಪ್ರಿಲ್

1 comment:

havyaka said...

ತಿಪ್ಪೆಗೆ ಮಗುವನ್ನು ಬಿಸಾಕಿದ ತಾಯಿಗೆ ಏನು ಹೇಳಬೇಕು